ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಸರ್ಕಾರಿ ನೌಕರರ ವೇತನ ಕಡಿತಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ರಾಜ್ಯ ಸರ್ಕಾರ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ಏಪ್ರಿಲ್ ತಿಂಗಳ ವೇತನ ಕಡಿತ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಲಾಕ್‌ಡೌನ್ ಹಿನ್ನೆಲೆ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದರೂ ನೌಕರರಿಗೆ ಏಪ್ರಿಲ್ ತಿಂಗಳ ವೇತನ ನೀಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ಲಾಕ್ ಡೌನ್ ಮೇ 3ರ ನಂತರವೂ ಮುಂದುವರೆದರೆ ಮೇ ತಿಂಗಳ ವೇತನ ನೀಡಲು ಸರ್ಕಾರಕ್ಕೆ ಕಷ್ಟವಾಗಲಿದೆ ಎಂದು ಹಿರಿಯ ಸಚಿವರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ರಾಜ್ಯದ ಆದಾಯ ಸಂಗ್ರಹಣೆಯಲ್ಲಿ ತೀವ್ರ ಕುಸಿತ ಕಂಡಿದೆ, ಜತೆಗೆ ಸಂಪನ್ಮೂಲಗಳ ಬಿಕ್ಕಟ್ಟು ಎದುರಾಗಿದೆ. ಆದರೂ, ರಾಜ್ಯ ಸರ್ಕಾರ ಈ ತಿಂಗಳು ತನ್ನ ನೌಕರರಿಗೆ ವೇತನ ಕಡಿತ ಮಾಡುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಸದ್ಯದ ಮಟ್ಟಿಗೆ ಏಪ್ರಿಲ್ ತಿಂಗಳ ಸಂಬಳ ನೀಡಲು ಯಾವುದೇ ಸಮಸ್ಯೆ ಇಲ್ಲ ಮತ್ತು ನಿಭಾಯಿಸಬಹುದಾಗಿದೆ. ಆದರೆ ಮೇ ತಿಂಗಳು ಕೂಡ ಆದಾಯ ಸಂಗ್ರಹಣೆಯ ದೃಷ್ಟಿಯಿಂದ ವಾಶ್‌ಔಟ್ ಆದರೆ, ಲಾಕ್‌ಡೌನ್ ಮುಂದುವರಿದರೆ ಪರಿಸ್ಥಿತಿ ತುಂಬಾ ಕಠಿಣವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.