ರಾಜ್ಯ

ರಾಮನಗರ: ಅಪಘಾತದಲ್ಲಿ ಕರ್ತವ್ಯನಿರತ ಪತ್ರಕರ್ತ ಸಾವು; ಎಚ್.ಡಿ. ಕುಮಾರಸ್ವಾಮಿ 5 ಲಕ್ಷ ರೂ. ಪರಿಹಾರ ಘೋಷಣೆ

Srinivasamurthy VN

ರಾಮನಗರ: ಕರ್ತವ್ಯನಿರತ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತರೊಬ್ಬರು ಅಪಘಾತಕ್ಕೀಡಾಗಿ ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ಮೃತರನ್ನು ಪಬ್ಲಿಕ್ ಟಿವಿಯ ಜಿಲ್ಲಾ ವರದಿಗಾರ ಹನುಮಂತು ಎಂದು ಗುರುತಿಸಲಾಗಿದೆ. ರಾಮನಗರ ಜಿಲ್ಲಾ ಕಾರಾಗೃಹದ ಮುಂಭಾಗ ಇಂದು ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ.

ಎಟಿಎಂ ಹಣ ಸಾಗಿಸುತ್ತಿದ್ದ ವಾಹನ ಡಿಕ್ಕಿ ಹೊಡೆದ ಪರಿಣಾಮ ಹನುಮಂತು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಅಪಘಾತಕ್ಕೆ ಕಾರಣವಾದ ವಾಹನವನ್ನು ಜಪ್ತಿ ಮಾಡಿ ಚಾಲಕನನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಜಿ ಸಿಎಂ ಕಂಬನಿ, ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ
ಇನ್ನು ವರದಿಗಾರ ಹನುಮಂತು ನಿಧನಕ್ಕೆ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಅಂತೆಯೇ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೂಡ ಕಂಬನಿ ಮಿಡಿದಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಪಘಾತದಿಂದ ದುರ್ಮರಣಕ್ಕೀಡಾದ ರಾಮನಗರ ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಅಕಾಲ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಹನುಮಂತು ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ವೈಯಕ್ತಿಕ ನೆರವು ನೀಡುತ್ತೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತನಗೆ ಆತ್ಮೀಯರಾಗಿದ್ದ ಹನುಮಂತು ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದ ದಿಟ್ಟ ಪತ್ರಕರ್ತರಾಗಿದ್ದರು. ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದರು. ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ. ಕರ್ತವ್ಯ ನಿರ್ವಹಣೆ ವೇಳೆ ಪ್ರಾಣತೆತ್ತ ಹನುಮಂತು ಅವರ ಆತ್ಮಕ್ಕೆ ಶಾಂತಿ ದಕ್ಕಲಿ ಎಂದು ಕುಮಾರ ಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಡಿಕೆ ಸಹೋದರರ ಸಂತಾಪ:
ಖಾಸಗಿ ವಾಹಿನಿಯ ರಾಮನಗರ ವರದಿಗಾರ ಹನುಮಂತು ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿಕೆ ಸುರೇಶ್ ಸಂತಾಪ ಸೂಚಿಸಿದ್ದಾರೆ.

ರಾಮನಗರದಲ್ಲಿ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಆಘಾತವಾಯಿತು. ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದಾರೆ. ಪಾದರಾಯನಪುರ ಗಲಭೆಯ ಆರೋಪಿಗಳನ್ನು ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ಸುದ್ದಿ ವರದಿ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ ದುರ್ಮರಣ ಹೊಂದಿದ್ದಾರೆ ಎಂಬ ವಿಷಯ ಕೇಳಿ ತೀವ್ರ ಬೇಸರವಾಗಿದೆ ಎಂದು ಹೇಳಿದ್ದಾರೆ.

ಇನ್ನು ಚಿಕ್ಕ ವಯಸ್ಸಿನವರಾಗಿದ್ದ ಹನುಮಂತು ಅವರ ಅಕಾಲಿಕ ಮರಣ ವಿಧಿ ಎಷ್ಟು ಕ್ರೂರಿ ಎಂಬುದನ್ನು ತೋರಿಸುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಸಂಕಷ್ಟದ ಸಮಯವನ್ನು ಎದುರಿಸಲು ಭಗವಂತ ಅವರ ಕುಟುಂಬ ಸದಸ್ಯರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಶೋಕ ಸಂದೇಶದಲ್ಲಿ ಶಿವಕುಮಾರ್ ಹಾಗೂ ಸುರೇಶ್ ತಿಳಿಸಿದ್ದಾರೆ.

SCROLL FOR NEXT