ರಾಜ್ಯ

ಚಿತ್ರರಂಗದ ಪತ್ರಕರ್ತರು, ಛಾಯಾಗ್ರಾಹಕರಿಗೆ ಆಹಾರ ಧಾನ್ಯ ವಿತರಿಸಿದ ಸಚಿವರಾದ ಬಿಸಿ ಪಾಟೀಲ್, ಗೋಪಾಲಯ್ಯ

Nagaraja AB

ಬೆಂಗಳೂರು: ಕೃಷಿ ಸಚಿವ ಹಾಗೂ ಚಲನಚಿತ್ರ ನಟರೂ ಆಗಿರುವ ಬಿ.ಸಿ.ಪಾಟೀಲ್ ಹಾಗೂ ಆಹಾರ ಸಚಿವ ಗೋಪಾಲಯ್ಯ ಅವರಿಂದು ಚಿತ್ರರಂಗದ ಪತ್ರಕರ್ತರು ಹಾಗೂ ಛಾಯಾಗ್ರಾಹಕರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ಚಿತ್ರ ರಂಗದ ಪತ್ರಕರ್ತರಿಗೆ ಹಾಗೂ ಛಾಯಾಗ್ರಾಹಕರಿಗೆ ಆಹಾರ ಧಾನ್ಯ ವಿತರಿಸಿದ ಬಳಿಕ ಮಾತನಾಡಿದ ಸಚಿವರು,ಯಾರೂ ಸಹ ಕೊರೊನಾದಿಂದ ಇಂತಹ ಸಂಕಷ್ಟದ ಪರಿಸ್ಥಿತಿ ಎದುರಾಗುತ್ತದೆ ಎಂದು  ಊಹಿಸಿರಲಿಲ್ಲ, ಚಲನಚಿತ್ರ ವಾಣಿಜ್ಯ ಮಂಡಳಿಯ ಸಾ.ರಾ.ಗೋವಿಂದು, ವೀರೇಶ್ ಅವರು ಚಿತ್ರರಂಗದ ಪತ್ರಕರ್ತರು ಹಾಗೂ ಛಾಯಾಗ್ರಾಹಕರಿಗೆ ಅಕ್ಕಿ,ಬೇಳೆ ಕಿಟ್ ನೀಡುವಂತೆ ತಮ್ಮ ಗಮನಕ್ಕೆ ತಂದಿದ್ದರು.ಈ ಬಗ್ಗೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಗೋಪಾಲಯ್ಯ ಅವರೊಂದಿಗೆ ಚರ್ಚಿಸಿದಾಗ ಅವರು ಅಕ್ಕಿ, ಬೇಳೆ‌ ಕೊಡಲು ಒಪ್ಪಿದರು.ಅಂತೆಯೇ ಇಂದು ಅವರ ಸಹಕಾರದೊಂದಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವರಾಗಿರುವ ತಮಗೆ ಸಾಧ್ಯವಾದಷ್ಟು ಜನರಿಗೆ ಸಹಕರಿಸಿ ಎಂದು ನಿರ್ದೇಶಿಸಿದ್ದಾರೆ.ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಿಜವಾದ ಜನಪ್ರತಿನಿಧಿಯ ಕರ್ತವ್ಯವಾಗುತ್ತದೆ. ಚಿತ್ರರಂಗಕ್ಕೆ ತಾವು ಬಂದು  25 ವರ್ಷಗಳಾಗಿವೆ. ಚಿತ್ರರಂಗದ ಸೇವೆ ಮಾಡುವ ಸದಾವಕಾಶ ತಮಗೆ ಲಭ್ಯವಾಗಿದೆ.ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಇನ್ನಷ್ಟು ಸಹಕರಿಸುವುದಾಗಿ ಭರವಸೆ ನೀಡಿದರು.

SCROLL FOR NEXT