ಹಿರಿಯ ನಾಗರಿಕರಿಗೆ ಕೊರೋನಾ ಪರೀಕ್ಷೆ ಕಡ್ಡಾಯ: ಕೆ. ಸುಧಾಕರ್
ಕೋವಿಡ್–19ಗೆ ರಾಜ್ಯದಲ್ಲಿ ಮೃತಪಟ್ಟವರು 55 ರಿಂದ 80 ವರ್ಷದೊಳಗಿನವರಾಗಿದ್ದು, ಹಿರಿಯ ನಾಗರಿಕರನ್ನು ಉಳಿಸಿಕೊಳ್ಳಲೇಬೇಕು ಎಂಬ ಕಾರಣಕ್ಕೆ 55 ವರ್ಷ ಮೇಲ್ಪಟ್ಟ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬೆಂಗಳೂರು: ‘ಕೋವಿಡ್–19ಗೆ ರಾಜ್ಯದಲ್ಲಿ ಮೃತಪಟ್ಟವರು 55 ರಿಂದ 80 ವರ್ಷದೊಳಗಿನವರಾಗಿದ್ದು, ಹಿರಿಯ ನಾಗರಿಕರನ್ನು ಉಳಿಸಿಕೊಳ್ಳಲೇಬೇಕು ಎಂಬ ಕಾರಣಕ್ಕೆ 55 ವರ್ಷ ಮೇಲ್ಪಟ್ಟ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
‘55 ವರ್ಷ ಮೇಲ್ಪಟ್ಟವರು ಸಣ್ಣ ಆಯಾಸ ಇದ್ದರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ನಿಗದಿತ ಆಸ್ಪತ್ರೆಗೆ ಬರಬೇಕು. ಇದುವರೆಗೆ ಮೃತಪಟ್ಟ ಹೆಚ್ಚಿನವರು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬಂದವರು. ಅಂತಹ ಪರಿಸ್ಥಿತಿಯಲ್ಲಿ ಅವರನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಶೇ 7.7ರಷ್ಟು (57.91 ಲಕ್ಷ) ಜನರಿದ್ದಾರೆ. ಮನೆಯಲ್ಲಿ ಅಂತರ ಕಾಯ್ದುಕೊಂಡು ಅವರನ್ನು ಇರಿಸುವುದರ ಜತೆಗೆ ಕೋವಿಡ್ ಪಿಡುಗು ಸಂಪೂರ್ಣ ನಿವಾರಣೆ ಆಗುವವರೆಗೆ ಹಿರಿಯ ನಾಗರಿಕರು ಅದರಲ್ಲೂ ಮುಖ್ಯವಾಗಿ ಶ್ವಾಸಕೋಶ, ಮೂತ್ರಪಿಂಡ, ಹೃದಯ, ಕ್ಯಾನ್ಸರ್, ಎಚ್ಐವಿ, ಅಧಿಕ ರಕ್ತದೊತ್ತಡ, ಮಧುಮೇಹದಂತಹ
ಕಾಯಿಲೆಗಳಿಂದ ಬಳಲುತ್ತಿರುವವರನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ’ ಎಂದರು.
ಪರೀಕ್ಷೆ ತ್ವರಿತ: ‘ಪ್ರಯೋಗಾಲಯ ಪರೀಕ್ಷೆ ನಡೆಯುತ್ತಿಲ್ಲ ಎಂಬ ಆರೋಪ ಸರಿಯಲ್ಲ. ರಾಜ್ಯದಲ್ಲಿ ಸರಾಸರಿ 59.21 ಪರೀಕ್ಷೆಗೆ ಒಂದು ಪಾಸಿಟಿವ್ ಫಲಿತಾಂಶ ಬರುತ್ತಿದೆ. ಸದ್ಯ ದಿನಕ್ಕೆ 2 ಸಾವಿರಕ್ಕಿಂತಲೂ ಅಧಿಕ ಮಾದರಿಗಳ ಪರೀಕ್ಷೆ ನಡೆಯುತ್ತಿದೆ. ಈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ ಇನ್ನೂ 10 ಪ್ರಯೋಗಾಲಯಗಳು ಹಾಗೂ ಮೇ ಅಂತ್ಯದ ವೇಳೆಗೆ 60 ಪ್ರಯೋಗಾಲಯಗಳು ಸ್ಥಾಪನೆಗೊಳ್ಳಲಿವೆ. ಈ ಎಲ್ಲ ಪ್ರಯೋಗಾಲಯಗಳ ಸ್ಥಾಪನೆಯ ಮೇಲ್ವಿಚಾರಣೆಯನ್ನು ನಿಮ್ಹಾನ್ಸ್ ವಹಿಸಲಿದೆ’ ಎಂದು ಸಚಿವ ಸುಧಾಕರ್ ಹೇಳಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.