ರಾಜ್ಯ

ಅನಾರೋಗ್ಯವೇ? ಆತಂಕ ಬೇಡ, ಸ್ವಚಿಕಿತ್ಸೆ ಬಿಟ್ಟು ಟೆಲಿಡಾಕ್ಟರ್'ಗೆ ಕರೆ ಮಾಡಿ...

Manjula VN

ಬೆಂಗಳೂರು: ಅನಾರೋಗ್ಯ ಬಂದ ಕೂಡಲೇ ಸಾಕಷ್ಟು ಮಂದಿ ಮೊದಲು ವೈದ್ಯರನ್ನು ಕಾಣಕೆ ಸ್ವಚಿಕಿತ್ಸೆ ಮಾಡಿಕೊಳ್ಳುವುದೇ ಹೆಚ್ಚು. ಆದರೆ, ವೈರಸ್ ಇರುವ ಇಂತಹ ಸಂದರ್ಭದಲ್ಲಿ ಅಂತಹ ದುಸ್ಸಾಹಸಕ್ಕೆ ಕೈ ಹಾಕದಿರಿ. ಜ್ವರ, ಶೀತ, ನೆಗಡಿಯಂತಹ ಲಕ್ಷಣಗಳು ಕಂಡುಬಂದ ಕೂಡಲೇ ಟೆಲಿಡಾಕ್ಟರ್ ಗಳಿಗೆ ಕರೆ ಮಾಡಿ ಸಲಹೆ ಹಾಗೂ ಮಾರ್ಗದರ್ಶನಗಳನ್ನು ಪಡೆದುಕೊಳ್ಳುವುದು ಉತ್ತಮ. 

ಜನರಿಗೆ ಮಾಹಿತಿ ನೀಡುವ ಸಲುವಾಗಿಯೇ ರಾಜ್ಯ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ವಾರ್ ರೂಮ್ ಗಳು ಕಾರ್ಯನಿರ್ವಹಿಸುತ್ತಿದ್ದು, ಅನಾರೋಗ್ಯ ಸಮಸ್ಯೆ ಹಿಡಿದು ಕರೆ ಮಾಡುವ ಜನರಿಗೆ ವೈದ್ಯರೊಂದಿಗೆ ಮಾತನಾಡುವ ಸಂಪರ್ಕ ಕಲ್ಪಿಸುತ್ತಿದೆ. 

ಸಾಕಷ್ಟು ಜನರು ಮಾರ್ಗದರ್ಶನಕ್ಕಾಗಿ 104 ಸಂಖ್ಯೆಗೆ ಕರೆ ಮಾಡುತ್ತಿದ್ದಾರೆ. ಆದರೆ, ಇದಕ್ಕಾಗಿಯೇ ಇದೀಗ ಹೊಸ ಫೋನ್ ನಂಬರ್ ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಸಂಖ್ಯೆಗಳಿಗೆ ಕರೆ ಮಾಡುವ ಜನರಿಗೆ ಅವರ ಸಮಸ್ಯೆಗೆ ಅನುಗುಣವಾಗಿ ಟೆಲಿಫೋನ್ ಮೂಲಕ ವೈದ್ಯರ ಸಂಪರ್ಕ ಕಲ್ಪಿಸಲಾಗುತ್ತದೆ. ಈ ದೂರವಾಣಿ ಸಂಖ್ಯೆಗಳ ಮೂಲಕ ಏಕಕಾಲದಲ್ಲಿ 1 ಲಕ್ಷ ಜನರ ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ. ಕರೆ ಸ್ವೀಕರಿಸುವ ಸಿಬ್ಬಂದಿಗಳು ಕೇವಲ ವೈದ್ಯಕೀಯ ಮಾರ್ಗದರ್ಶನವಷ್ಟೇ ಅಲ್ಲದೆ, ಹತ್ತಿರ ಇರುವ ಫೀವರ್ ಕ್ಲಿನಿಕ್ ವೈದ್ಯರು, ಹಾಗೂ ಮನೋವೈದ್ಯರ ಸಂಪರ್ಕವನ್ನು ಕಲ್ಪಿಸುತ್ತಾರೆ. ಈ ಬಗ್ಗೆ ಮಾಹಿತಿಯನ್ನೂ ನೀಡುತ್ತಾರೆಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ವೈರಸ್ ಕುರಿತು ಜನರಲ್ಲಿ ಸಾಕಷ್ಟು ಆತಂಕ ಎದುರಾಗಿದೆ. ಸಣ್ಣಪುಟ್ಟ ಲಕ್ಷಣಗಳು ಕಂಡು ಬಂದ ಕೂಡಲೇ ಕೆಲವರು ಫೀವರ್ ಕ್ಲಿನಿಕ್ ಗಳಿಗೆ ಬರುತ್ತಿದ್ದರೆ, ಮತ್ತೆ ಕೆಲವರು ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ವೈದ್ಯರನ್ನೇ ಸಂಪರ್ಕಿಸದೆ ಸ್ವಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ವೈದ್ಯಕೀಯ ಸೇವೆ ಜನರಿಗೆ ತಲುಪಿಸುವ ಸಲುವಾಗಿ ಈ ಸೇವೆಯನ್ನು ಆರಂಭಿಸಲಾಗಿದೆ. ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಜನರನ್ನು ಹೊರಗೆ ಬರದಂತೆ ನೋಡಿಕೊಳ್ಳಲಾಗುತ್ತದೆ. ರೋಗಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವುದೂ ಅಲ್ಲದೆ. ರೋಗಿಗಳ ಆರೋಗ್ಯ ಸ್ಥಿತಿ ಕುರಿತು ಅವಲೋಕನ ನಡೆಸುತ್ತಲೇ ಇರುತ್ತೇವೆ. ರೋಗಿಗಳನ್ನು ಫೀವರ್ ಕ್ಲಿನಿಕ್ ಹಾಗೂ ವೈದ್ಯಕೀಯ ಕೇಂದ್ರಗಳಿಗೆ ತೆರಳುವಂತೆ ಶಿಫಾರಸು ಮಾಡಿದ ಕೂಡಲೇ ಅವರ ಆರೋಗ್ಯ ಸ್ಥಿತಿ ಕುರಿತು ಆಗಾಗ ಮಾಹಿತಿ ಪಡೆಯುತ್ತಿರುತ್ತೇವೆಂದು ತಿಳಿಸಿದ್ದಾರೆ. 

ವೈದ್ಯಕೀಯ ಸಲಹೆ ಹಾಗೂ ಮಾರ್ಗದರ್ಶನ ಪಡೆಯಲು ಇಚ್ಛಿಸುವ ಜನರು ಬಿಬಿಎಂಪಿ ಬಿಡುಗಡೆಗೊಳಿಸಿರುವ 7447118949 ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

SCROLL FOR NEXT