ರಾಜ್ಯ

ಪಾದರಾಯನಪುರ ಗಲಭೆ ಪ್ರಕರಣ: ರಾಮನಗರ ಜೈಲಲ್ಲಿರುವ 3 ಆರೋಪಿಗಳಲ್ಲಿ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ

Manjula VN

ಬೆಂಗಳೂರು: ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿ, ರಾಮನಗರ ಜೈಲು ಸೇರಿರುವ 54 ಆರೋಪಿಗಳ ಪೈಕಿ ಇದೀಗ ಮತ್ತೆ ಮೂವರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. 

ರಾಮನಗರ ಜೈಲಿನಲ್ಲಿರುವ ಪುಂಡರ ಪೈಕಿ ಈ ಹಿಂದೆ ಇಬ್ಬರಲ್ಲಿ ವೈರಸ್ ದೃಢಪಟ್ಟಿತ್ತು. ಇದೀಗ ಮತ್ತೆ ಮೂವರಲ್ಲಿ ವೈರಸ್ ದೃಢಪಟ್ಟದ್ದು, ಪ್ರಕರಣಗಳಿಂದ ಸೋಂಕಿತರ ಸಂಖ್ಯೆ ಇದೀಗ ಐದಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ. 

ಕ್ವಾರಂಟೈನ್ ಮಾಡುವ ವೇಳೆ ಇಲ್ಲಿನ ಪಾದರಾಯನಪುರದಲ್ಲಿ ಗಲಭೆ ಸೃಷ್ಟಿಸಿ, ರಾಮನಗರ ಜೈಲಿನಲ್ಲಿ ಇದೀಗ 54 ಆರೋಪಿಗಳು ಬಂಧಿಯಾಗಿದ್ದಾರೆ. ಈ ಪೈಕಿ ನಿನ್ನೆಯಷ್ಟೇ ಇಬ್ಬರಲ್ಲಿ ವೈರಸ್ ದೃಢಪಟ್ಟಿತ್ತು. ಹೀಗಾಗಿ ಇಬ್ಬರನ್ನೂ ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಈ ಆರೋಪಿಗಳಿಂದಾಗಿ ಈವರೆಗೂ ಸೋಂಕು ರಹಿತವಾಗಿದ್ದ ರಾಮನಗರಕ್ಕೆ ವೈರಸ್ ಬಂದಂತಾಗಿದೆ. ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರಗೊಳಿಸುವಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಂಸದ ಡಿಕೆ ಸುರೇಶ್ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಐವರು ಆರೋಪಿಗಳಿಗೆ ಕೊರೋನಾ ಕಾಣಿಸಿರುವುದು ಜೈಲಿನ ಸಿಬ್ಬಂದಿ ಹಾಗೂ ಸೋಂಕು ಮುಕ್ತ ರಾಮನಗರ ಜನರಿಗೆ ಆತಂಕ ಸೃಷ್ಟಿಸಿದೆ. 

ಐವರು ಆರೋಪಿಗಳಲ್ಲಿ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿ ಸಿಬ್ಬಂದಿಯನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಸಿಬ್ಬಂದಿಯ ರಕ್ತ ಮತ್ತು ಸ್ಕ್ಯಾಬ್ ಮಾದರಿ ಪರೀಕ್ಷೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಪಾದರಾಯನಪುರದಲ್ಲಿ ಸೋಂಕು ಶಂಕಿತರನ್ನು ಕ್ವಾರಂಟೈನ್ ನಲ್ಲಿಡಲು ಏ.19ರಂದು ಆರೋಗ್ಯ ಇಲಾಖೆ, ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ತೆರಳಿದ್ದರು. ಈ ವೇಳೆ ಹಲವು ನೂರಾರು ಮಂದಿ ದಾಳಿ ನಡೆಸಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದರು. ಮೇಜು, ಕುರ್ಜಿ, ಪೆಂಡಾಲ್, ಚೆಕ್ ಪೋಸ್ಟ್ ಸೇರಿದಂತೆ ಸರ್ಕಾರದ ಆಸ್ತಿ ಪಾಸ್ತಿ ನಾಶಪಡಿಸಿ ಆತಂಕ ವಾತಾವರಣ ಸೃಷ್ಟಿಸಿದ್ದರು.

SCROLL FOR NEXT