ರಾಜ್ಯ

ಕೊರೋನಾ ವೈರಸ್ ಲಾಕ್ ಡೌನ್ ಗೆ ದಿನಗೂಲಿ ಕಾರ್ಮಿಕರು ತತ್ತರ; ಸ್ವಂತ ಭೂಮಿಯನ್ನೇ ಮಾರಿ ನೆರವಿಗೆ ನಿಂತ ಕರ್ನಾಟಕದ ಸೋಹದರರು!

Srinivasamurthy VN

ಕೋಲಾರ: ಒಂದು ಯುದ್ಧ ಏರ್ಪಟ್ಟಾಗ ಎಲ್ಲರೂ ಒಗ್ಗೂಡಿ ಹೋರಾಡುವುದುಂಟು.. ಇದೀಗ ಭಾರತ ಕೂಡ ಅಂತಹುದೇ ಸ್ಥಿತಿಯಲ್ಲಿದ್ದು, ಕೊರೋನಾ ಎಂಬ ಕಾಣದ ಶತ್ರುವಿನ ವಿರುದ್ಧ ಹೋರಾಟ ಮಾಡಲು ಜಾತಿ, ಸಮುದಾಯ, ಧರ್ಮಗಳನ್ನು ಮರೆತು ಒಗ್ಗೂಡಿ ನಿಂತಿದೆ. ಇದಕ್ಕೆ  ಕೋಲಾರದ ಸಹೋದರರು ಸ್ಪಷ್ಟ ಉದಾಹರಣೆಯಾಗಿ ನಿಂತಿದ್ದಾರೆ.

ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಹೇರಿದೆ. ಆದರೆ ಈ ಲಾಕ್ ಡೌನ್ ನಿಂದ ಲಕ್ಷಾಂತರ ದಿನಗೂಲಿ ನೌಕರರು ಅಕ್ಷರಶಃ ನಿರಾಶ್ರಿತರಾಗಿದ್ದು, ಕೆಲಸವಿಲ್ಲದೇ ಒಪ್ಪೊತ್ತಿನ ಊಟಕ್ಕೂ  ಪರದಾಡುತ್ತಿದ್ದಾರೆ. ಇಂತಹ ಕುಟುಂಬಗಳಿಗೆ ಕರ್ನಾಟಕ ಮೂಲದ ಇಬ್ಬರು ಸೋಹದರರು ನೆರವಿಗೆ ಧಾವಿಸಿದ್ದು, ತಮ್ಮ ಜೀವನ ನಿರ್ವಹಣೆಗೆ ಎಂದು ಇಟ್ಟುಕೊಂಡಿದ್ದ ಭೂಮಿಯನ್ನೇ ಮಾರಿ ದಿನಗೂಲಿ ನೌಕರರಿಗೆ ದಾಸಹೋ ನಡೆಸುತ್ತಿದ್ದಾರೆ.

ಹೌದು... ನಮ್ಮ ಕೋಲಾರದ ನಿವಾಸಿಗಳಾದ ತಾಜಾಮ್ಮುಲ್ ಪಾಷಾ ಮತ್ತು ಮುಜಾಮಿಲ್ ಪಾಷಾ ಲಾಕ್ ಡೌನ್ ಸಂದರ್ಭದಲ್ಲಿ ದಿನಗೂಲಿ ನಿರಾಶ್ರಿತರಿಗಾಗಿ ದಾಸೋಹ ನಡೆಸುತ್ತಿದ್ದಾರೆ. ತಮ್ಮ ಮನೆಯ ಪಕ್ಕದಲ್ಲೇ ಒಂದು ಟೆಂಟ್ ನಿರ್ಮಿಸಿಕೊಂಡು ಅಲ್ಲಿ ನಿತ್ಯ ದಿನಗೂಲಿ ನೌಕರರಿಗೆ  ಊಟ ನೀಡುತ್ತಿದ್ದಾರೆ. ಈ ದಾಸೋಹ ಕಾರ್ಯಕ್ರಮಕ್ಕೆ ಪಾಷಾ ಸಹೋದರರು ತಮ್ಮ ಜೀವನಾಧಾರವಾಗಿದ್ದ ಭೂಮಿಯನ್ನೇ 25 ಲಕ್ಷ ರೂಗಳಿಗೆ ಮಾರಾಟ ಮಾಡಿದ್ದು, ಬಂದ ಹಣದಲ್ಲಿ ಅಕ್ಕಿ, ಗೋಧಿ, ಎಣ್ಣೆ ಸೇರಿದಂತೆ ಇತರೆ ದಿನಸಿ ಸಾಮಾಗ್ರಿಗಳು ಮತ್ತು ತರಕಾರಿ ಖರೀದಿ ಮಾಡಿ  ಸಮುದಾಯ ಅಡುಗೆ ಮನೆ ನಿರ್ಮಿಸಿ ದಿನಗೂಲಿ ನೌಕರರಿಗೆ ಊಟ ನೀಡುತ್ತಿದ್ದಾರೆ.

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಬೇಧಭಾವವಿಲ್ಲದೇ ಎಲ್ಲ ಧರ್ಮಗಳ ದಿನಗೂಲಿ ನೌಕರರಿಗೆ ನಿತ್ಯ ಊಟ ನೀಡುವ ಮೂಲಕ ಸಮಾಜದ ಇತರರಿಗೆ ಮಾದರಿಯಾಗಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರದವರಾಗಿದ್ದ ಪಾಷಾ ಸಹೋದರರು ತಮ್ಮ ಚಿಕ್ಕ ವಯಸ್ಸಿನಲ್ಲೇ ತಮ್ಮ ಪೋಷಕರನ್ನು  ಕಳೆದುಕೊಂಡಿದ್ದರು. ಆಗ ತಾಜಾಮುಲ್ಲ್ ಪಾಷಾ ಅವರಿಗೆ ಕೇವಲ 5 ವರ್ಷ ಮತ್ತು ಅವರ ತಮ್ಮ ಮುಜಾಮಿಲ್ ಪಾಷಾಗೆ 3ವರ್ಷ ವಯಸ್ಸಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಇಬ್ಬರೂ ಕೋಲಾರದಲ್ಲಿದ್ದ ತಮ್ಮ ಅಜ್ಜಿಮನೆಗೆ ಬರಬೇಕಾಯಿತು. 

ಈ ಕುರಿತು ಮಾತನಾಡಿರುವ ಅಣ್ಣ ತಾಜಾಮ್ಮುಲ್ ಪಾಷಾ ನಾವು ಕೋಲಾರಕ್ಕೆ ಬಂದಾಗ ನಮ್ಮ ಅಜ್ಜಿ ಕೂಡ ಅತ್ಯಂತ ಬಡವರಾಗಿದ್ದರು. ಆದರೆ ಇಲ್ಲಿನ ಜನ ನಮ್ಮ ಕೈ ಬಿಡಲಿಲ್ಲ. ಜಾತಿ ಧರ್ಮ ನೋಡದೇ ನಮಗೆ ಆಶ್ರಯ ನೀಡಿ ನೆರವಾದರು, ಅವರು ಅಂದು ನೀಡಿದ್ದ ನೆರವಿನಿಂದಲೇ  ನಾವು ಇಂದು ಈ ಮಟ್ಟಕ್ಕೆ ಬೆಳೆದಿದ್ದೇವೆ. ನಾನು ಮತ್ತು ನನ್ನ ತಮ್ಮ ರಿಯಲ್ ಎಸ್ಟೇಟ್ ಮತ್ತು ಬಾಳೆಹಣ್ಣು ಉದ್ಯಮದಲ್ಲಿ ತೊಡಗಿದ್ದೇವೆ. ದೇವರು ನಮಗೆ ಸಾಕಷ್ಟು ನೀಡಿದ್ದಾನೆ. ಲಾಕ್ ಡೌನ್ ಸಂದರ್ಭದಲ್ಲಿ ಜನ ಕಷ್ಟ ಪಡುವುದನ್ನು ನೋಡಿದರೆ ನಮಗೆ ನಮ್ಮ ಚಿಕ್ಕಂದಿನ ನೆನಪು ಬಂದವು.  ಹೀಗಾಗಿ ನಾವು ಕೂಡ ಅವರಿಗೆ ನೆರವಾಗಬೇಕು ಎಂಬ ಕಾರಣದಿಂದ ನಮ್ಮ ಭೂಮಿಯನ್ನು 25 ಲಕ್ಷ ರೂಗಳಿಗೆ ಮಾರಾಟ ಮಾಡಿದ್ದೇವೆ. ಈ ಸಂಬಂಧ ನಮ್ಮ ಸ್ನೇಹಿತರಿಗೆ ಪತ್ರ ಬರೆದುಕೊಟ್ಟು ಹಣ ಪಡೆದಿದ್ದೇವೆ. ಲಾಕ್ ಡೌನ್ ಮುಗಿದ ಬಳಿಕ ಅವರಿಗೆ ರಿಜಿಸ್ಚರ್ ಮಾಡಿಸಿಕೊಡುತ್ತೇವೆ.  ಬಂದ ಹಣದಲ್ಲಿ ಅಕ್ಕಿ, ಬೇಳೆ, ಎಣ್ಣೆ ಕಾಳುಗಳನ್ನು ತರಿಸಿಕೊಂಡು ಅಡುಗೆ ತಯಾರಿಸಿ ನಿರಾಶ್ರಿತ ದಿನಗೂಲಿ ಕಾರ್ಮಿಕರಿಗೆ ಊಟ ನೀಡುತ್ತಿದ್ದೇವೆ. ಅಲ್ಲದೆ ಸುಮಾರು 3 ಸಾವಿರ ಕುಟುಂಬಗಳಿಗೆ ಅಗತ್ಯ ದಿನಸಿ ವಸ್ತುಗಳನ್ನು ಕೂಡ ನೀಡುತ್ತಿದ್ದೇವೆ. ಅಂತೆಯೇ ಮಾರಕ ಕೊರೋನಾ ವೈರಸ್  ನಿಂದಜ ರಕ್ಷಿಸಿಕೊಳ್ಳಲು ಮಾಸ್ಕ್ ಮತ್ತು ಸ್ಯಾನಿಟೈಸರ್ಸ್ ಗಳನ್ನು ಕೂಡ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಕೋಲಾರ ಜಿಲ್ಲಾಡಳಿತಕ್ಕೆ ಧನ್ಯವಾದ
ಇನ್ನು ಪಾಷಾ ಸಹೋದರರ ಈ ಅಪೂರ್ವ ಸೇವೆಗೆ ಕೋಲಾರ ಜಿಲ್ಲಾಡಳಿತ ಕೂಡ ಸಾಥ್ ನೀಡಿದ್ದು, ಪಾಷಾ ಸಹೋದರರಿಗೆ ಮತ್ತು ಅವರೆಗೆ ನೆರವು ನೀಡಲು ಮುಂದೆ ಬಂದಿರುವ ಯುವಕರಿಗೆ ಜಿಲ್ಲಾಡಳಿತ ಪಾಸ್ ನೀಡಿದೆ. ಆ ಮೂಲಕ ನಿರಾಶ್ರಿತರಿಗೆ ನೆರವಾಗಲು ಸಹಕಾರ ನೀಡಿದೆ. 

SCROLL FOR NEXT