ರಾಜ್ಯ

ಕರೋನವೈರಸ್ ಪರೀಕ್ಷೆಗೆ ಎಂಎಲ್‍ಸಿ ಶ್ರೀಕಂಠೇಗೌಡ ವಿರೋಧ; ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪುತ್ರನ ಬಂಧನ

Sumana Upadhyaya

ಮಂಡ್ಯ: ಕೊವಿಡ್‍-19 ಪರೀಕ್ಷೆಗಾಗಿ ಬಂದಿದ್ದ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವಿಧಾನ ಪರಿಷತ್‍ ಸದಸ್ಯ ಕೆ.ಟಿ.ಶ್ರೀಕಂಠೇ ಗೌಡ (ಜೆಡಿಎಸ್‍) ಪುತ್ರ ಕೃಶಿಕ್ ನನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಪತ್ರಕರ್ತರ ಆರೋಗ್ಯ ತಪಾಸಣೆಯನ್ನು ತಮ್ಮ ಮನೆ ಸಮೀಪದ ಡಾ ಬಿಆರ್ ಅಂಬೇಡ್ಕರ್ ಭವನದಲ್ಲಿ ನಡೆಸುವುದಕ್ಕೆ ಶ್ರೀಕಂಠೇಗೌಡ ತಮ್ಮ ಬೆಂಬಲಿಗರೊಂದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪತ್ರಕರ್ತನ ಮೇಲೆ ಹಲ್ಲೆಯ ನಂತರ ಸ್ಥಳದಲ್ಲಿ ಸ್ವಲ್ಪ ಸಮಯದವರೆಗೆ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಭವನದಲ್ಲಿ ಪತ್ರಕರ್ತರಿಗಾಗಿ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಶುಕ್ರವಾರ 17 ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರೆ, 21 ಮಂದಿ ಶನಿವಾರ ಪರೀಕ್ಷೆ ಮಾಡಿಸಿಕೊಳ್ಳಲು ಬಂದಿದ್ದರು.

ಭವನದಲ್ಲಿ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಿರುವುದಕ್ಕೆ ಶ್ರೀಕಂಠೇಗೌಡ ಮತ್ತು ಬೆಂಬಲಿಗರು ಜಿಲ್ಲಾಡಳಿತವನ್ನು ಟೀಕಿಸಿದ್ದಾರೆ. ಇದನ್ನು ಮಾಧ್ಯಮ ಪ್ರತಿನಿಧಿಗಳು ವಿರೋಧಿಸಿದ್ದಾರೆ. 

ಶ್ರೀಕಂಠೇಗೌಡ, ಅವರ ಪುತ್ರ ಮತ್ತು ಬೆಂಬಲಿಗರು ಸ್ಥಳದಲ್ಲಿಯೇ ಸರ್ಕಾರಿ ಸಿಬ್ಬಂದಿಯನ್ನು ನಿಂದಿಸಿದ್ದಾರೆ. ಕೃಶಿಕ್‍ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆತನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದ್ದಾರೆ.

ಈ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ನಡೆಸಿ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಎಂ ವಿ ವೆಂಕಟೇಶ್ ಹೇಳಿದ್ದಾರೆ.

ಕರ್ನಾಟಕ ಪತ್ರಕರ್ತರ ಒಕ್ಕೂಟ (ಕೆಜೆಯು) ಈ ಘಟನೆಯನ್ನು ಖಂಡಿಸಿದ್ದು, ಗೌಡ, ಅವರ ಪುತ್ರ ಮತ್ತು ಅವರ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಆರೋಪಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಂಡ್ಯ ಜಿಲ್ಲೆಯ ಕೆಜೆ ಯು ಅಧ್ಯಕ್ಷ ಬಿಟಿ ಮೋಹನ್‌ಕುಮಾರ್ ಒತ್ತಾಯಿಸಿದ್ದಾರೆ.

SCROLL FOR NEXT