ರಾಜ್ಯ

ನಂದಿನಿ ಮಳಿಗೆಗಳ ಬಳಿ ಹಣ್ಣು, ತರಕಾರಿ ಮಾರಾಟಕ್ಕೆ ಒಪ್ಪಿಗೆ: ಬಾಲಚಂದ್ರ ಜಾರಕಿಹೊಳಿ

Lingaraj Badiger

ಬೆಂಗಳೂರು: ನಂದಿನಿ ಮಳಿಗೆಗಳ ಬಳಿ ಹಣ್ಣು, ತರಕಾರಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಮತ್ತೊಂದು ಮಹತ್ವದ ಯೋಜನೆ ರೂಪಿಸಲಾಗಿದೆ. ಹಣ್ಣು, ತರಕಾರಿ ಮಾರಾಟ ಮಾಡಲು ಆಗದೆ ತೊಂದರೆಗೆ ಈಡಾಗಿದ್ದ ರೈತರಿಗೆ ಇದು ಅನುಕೂಲ ಆಗಲಿದೆ. ಸಾಕಷ್ಟು ರೈತರು ಸ್ವತಃ ತಾವೇ ಹಣ್ಣು, ತರಕಾರಿ ಮಾರಾಟ ಮಾಡುತ್ತೇವೆ, ಆದರೆ ಸ್ಥಳಾವಕಾಶ ಇಲ್ಲ ಎಂದು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಂದಿನಿ ಮಳಿಗೆಗಳ ಪಕ್ಕದಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿತ್ತು. ಅದರಂತೆ ತೋಟಗಾರಿಕೆ ಇಲಾಖೆಯಿಂದ ಕೆಎಂಎಫ್ ಗೆ ಮನವಿ ಮಾಡಲಾಗಿತ್ತು ಎಂದು ಅವರು ತಿಳಿಸಿದರು.

ಕೆಲವು ನಂದಿನಿ ಮಳಿಗೆ ಪಕ್ಕದಲ್ಲಿ ಹಾಫ್ ಕಾಮ್ಸ್ ಮಳಿಗೆ ಇದೆ. ಅಂತಹ ಸ್ಥಳಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ರಾಜ್ಯಾದ್ಯಂತ ಕೆಎಂಎಫ್ ಹಾಗೂ 14 ಜಿಲ್ಲಾ ಹಾಲು ಒಕ್ಕೂಟ ಸೇರಿ 1500 ಕ್ಕಿಂತ ಹೆಚ್ಚು ಮಳಿಗೆಗಳಿವೆ. ರೈತರು ಈ ಸ್ಥಳಗಳಲ್ಲಿ ಹಣ್ಣು, ತರಕಾರಿಗಳನ್ನು ನೇರವಾಗಿ ಮಾರಾಟ ಮಾಡಬಹುದು. ಹೀಗೆ ಮಾರಾಟಕ್ಕೆ ಬಂದ ರೈತರಿಗೆ ಕೆಎಂಎಫ್ ವತಿಯಿಂದ ಪ್ರತಿನಿತ್ಯ ಉಚಿತವಾಗಿ ನೀರು, ಮಜ್ಜಿಗೆ, ಸ್ಯಾನಿಟೈಸರ್, ಕೈಗವಚ(ಗ್ಲೌಸ್), ಮಾಸ್ಕ್ ಗಳನ್ನ ನೀಡಲಾಗುತ್ತದೆ ಎಂದರು.

ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಮಾರಾಟ ಮಾಡಬಹುದು. ತೂಕದ ಯಂತ್ರ ಸೇರಿದಂತೆ ಹಣ್ಣು, ತರಕಾರಿ ಮಾರಾಟಕ್ಕೆ ಬೇಕಾದ ಇತರೆ ಸಾಮಗ್ರಿಗಳನ್ನು ರೈತರೆ ತರಬೇಕು. ಮಾರಾಟಕ್ಕೆ ಬರುವ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪ್ರತಿ ಹತ್ತು ಮಳಿಗೆಗೆ ಒಬ್ಬರನ್ನು ಮೇಲ್ವಿಚಾರಕರನ್ನು ನೇಮಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

SCROLL FOR NEXT