ರಾಜ್ಯ

ರಾಜ್ಯದಲ್ಲಿ ಲಾಕ್ ಆಗಿದ್ದ ಗುಜರಾತಿನ 58 ವೈದ್ಯಕೀಯ ವಿದ್ಯಾರ್ಥಿಗಳು ತವರಿಗೆ ವಾಪಸ್ 

Nagaraja AB

ಬೆಂಗಳೂರು:ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ತಮ್ಮ ಸ್ವಂತ ಊರುಗಳಿಗೆ ತೆರಳಲು ಸಾಧ್ಯವಾಗದೆ ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಗುಜರಾತಿನ 58 ವಿದ್ಯಾರ್ಥಿಗಳು ಇಂದು ತಮ್ಮ ತವರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. 

ಮೂರು ರಾಜಹಂಸ ಬಸ್ ಗಳಲ್ಲಿ ಈ ವಿದ್ಯಾರ್ಥಿಗಳನ್ನು ಕಳುಹಿಸಲಾಗಿದ್ದು, ಸೋಮವಾರ ಮಧ್ಯಾಹ್ನ ಗುಜರಾತ್ ತಲುಪಿದ್ದಾರೆ ಎಂದು ವೈದ್ಯಕೀಯ ಕಾಲೇಜುಗಳ ಮೂಲಗಳಿಂದ ತಿಳಿದುಬಂದಿದೆ.

ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರಿಂದ ಜಿಲ್ಲಾಧಿಕಾರಿಗಳನ್ನು  ಕೋರಲಾಯಿತು ಎಂದು ಕಾಲೇಜ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇತರ ರಾಜ್ಯಗಳ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮತ್ತೋರ್ವ ಅಧಿಕಾರಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ  ಹಾಗೂ ರಾಜ್ಯಪಾಲರ ಕಚೇರಿ ನಿರ್ದೇಶನದಂತೆ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.

ರಾಜಹಂಸ ಬಸ್ ಗಳಲ್ಲಿ ಭಾನುವಾರ ರಾತ್ರಿ ಅಹಮದಾಬಾದಿನ ಸರ್ಕಾರಿ ವಸತಿ ಗೃಹದತ್ತ ವಿದ್ಯಾರ್ಥಿಗಳು ತೆರಳಿದರು.  ಬಸ್ ಹತ್ತುವ ಮುನ್ನ ಎಲ್ಲರನ್ನು ತಪಾಸಣೆ ಮಾಡಲಾಯಿತು.ಗುಜರಾತಿನ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಹಾಗೂ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಪೊಲೀಸ್ ಅಧಿಕಾರಿಗಳ ಜೊತೆಗಿನ ಸಮನ್ವಯದೊಂದಿಗೆ ಸಾರಿಗೆ ವ್ಯವಸ್ಥೆ ಮಾಡಲಾಯಿತು.

ಸರ್ಕಾರಿ ವಸತಿ ಗೃಹದಿಂದ ವಿದ್ಯಾರ್ಥಿಗಳ ಸ್ವಗೃಹಗಳಿಗೆ ಡ್ರಾಪ್ ಮಾಡಲಾಗುತ್ತಿದೆ ಎಂದು ಕಾಲೇಜ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಮೂರು ಬಸ್ ಗಳಿಗೆ ಪೊಲೀಸ್ ಸಿಬ್ಬಂದಿ ಒದಗಿಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿವಿ ರಿಜಿಸ್ಟ್ರಾರ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಬಾಗಲಕೋಟೆ, ಧಾರವಾಡ, ಹಾವೇರಿ, ದಾವಣಗೆರೆ ಮತ್ತು ಚಿತ್ರದುರ್ಗ ಮಾರ್ಗವಾಗಿ ವಿದ್ಯಾರ್ಥಿಗಳು ಗುಜರಾತ್ ತಲುಪಿದ್ದಾರೆ. 

SCROLL FOR NEXT