ರಾಜ್ಯ

ಮಂಗಳೂರಿನಲ್ಲಿ ತಾಯಿ-ಮಗನಿಗೆ ಕೋವಿಡ್ ಸೋಂಕು ದೃಢ

Srinivas Rao BV

ಮಂಗಳೂರು: ಕೊರೋನಾ ಸೋಂಕಿತರೊಬ್ಬರು ಮೃತಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮತ್ತು ಅವರ ಪುತ್ರನಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಮಂಗಳೂರಿನ ಪಡೀಲ್‌ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಂಟ್ವಾಳದ ಕಸಬಾ ನಿವಾಸಿ 78 ವರ್ಷದ ಮಹಿಳೆ (ರೋಗಿ-432) ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದರು. ಅದೇ ಆಸ್ಪತ್ರೆಯಲ್ಲಿ ಕುಲಶೇಖರದ 80 ವರ್ಷದ ಮಹಿಳೆ ಕೂಡ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ಮಹಿಳೆಯ ಪಕ್ಕದ ಹಾಸಿಗೆಯಲ್ಲೇ ಈಗ ಸೋಂಕು ದೃಢಪಟ್ಟಿರುವ ಮಹಿಳೆ ಇದ್ದರು. ತಾಯಿ ಮತ್ತು ಮಗನಿಗೆ ಅಲ್ಲಿಂದಲೇ ಸೋಂಕು ತಗಲಿದೆ ಎಂದು ಆರೋಗ್ಯ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಲಶೇಖರದ ನಿವಾಸಿ 80 ವರ್ಷದ ಮಹಿಳೆ ಮತ್ತು ಅವರ ಪುತ್ರ 45 ವರ್ಷದ ಇಬ್ಬರು ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆಯ ವರದಿಗಳು ಇಂದು ಸ್ವೀಕೃತವಾಗಿದ್ದು, ವರದಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ ಎಂದು ದ.ಕ. ಜಿಲ್ಲಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸೋಮವಾರ ರಾಜ್ಯದಲ್ಲಿ ಒಟ್ಟು 8 ಕೊರೋನ ಸೋಂಕು ಪಾಸಿಟಿವ್ ದೃಢವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಂಗಳೂರು ನಗರದಲ್ಲಿ ಇದು ಮೊದಲ ಪ್ರಕರಣವಾಗಿದೆ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಗಲಿದವರ ಸಂಖ್ಯೆ 19ಕ್ಕೇರಿದೆ. 12 ಮಂದಿ ಗುಣಮುಖರಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಏಳು ಜನರು ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

SCROLL FOR NEXT