ಬೆಂಗಳೂರು: ಲೈಂಗಿಕ ಕಿರುಕುಳ ನೀಡಿ ಪರಾರಿಯಾದ ಯುವಕನನ್ನು ಯುವತಿಯೊಬ್ಬಳು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಟನ್ ಪೇಟೆಯ ಸಿದ್ದಾರ್ಥ ನಗರದ ನಿವಾಸಿ ಮುಹಮ್ಮದ್ ಫಯಾಝ್ (21) ಬಂಧಿತ ಆರೋಪಿ.
ಏಪ್ರಿಲ್ 25ರಂದು 25 ವರ್ಷದ ಯುವತಿ ತರಕಾರಿ ತರಲು ಮನೆಯಿಂದ ಒಂಟಿಯಾಗಿ ಹೋಗುತ್ತಿದ್ದರು. ಆಗ ಆರೋಪಿ ಯುವಕ ಯುವತಿಯ ಬಳಿ ಬಂದು ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ರಕ್ಷಣೆ ಗಾಗಿ ಕೂಗಾಟ ರಕ್ಷಣೆಗಾಗಿ ಕೂಗಾಡಿದ್ದ ಯುವತಿ, ತಾನೇ ಆರೋಪಿಯನ್ನು ಹಿಡಿದುಕೊಂಡು ಮುಖ್ಯರಸ್ತೆಗೆ ಎಳೆದು ತಂದಿದ್ದರು. ಅಷ್ಟರಲ್ಲೇ ಸ್ಥಳೀಯರು ರಕ್ಷಣೆಗೆ ಬಂದಿದ್ದರು.
ಅದೇ ವೇಳೆ ಆರೋಪಿ, ಯುವತಿಯ ಎಡಗೈ ಕಚ್ಚಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಯುವತಿಯೇ ಸ್ಥಳೀಯರ ಜೊತೆ ಸೇರಿ ಬೆನ್ನಟ್ಟಿ ಆರೋಪಿಯನ್ನು ಹಿಡಿದಿದ್ದರು. ನಂತರ, ಸ್ಥಳೀಯರೇ ಆತನನ್ನು ಥಳಿಸಿದ್ದರು ಎಂದು ಪೊಲೀಸರು ತಿಳಿಸಿದರು.
‘ಪ್ಲಂಬರ್ ಕೆಲಸ ಮಾಡುತ್ತಿದ್ದ ಆರೋಪಿ ಮೊಹಮ್ಮದ್ ಫಯಾಜ್, ಸರ ಕಳವು ಪ್ರಕರಣದಲ್ಲೂ ಭಾಗಿಯಾಗಿದ್ದ. ಈತನ ವಿರುದ್ಧ ಕೆಂಗೇರಿ ಸೇರಿ ಹಲವು ಠಾಣೆಗಳಲ್ಲಿ ಪ್ರಕರಣಗಳೂ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.