ರಾಜ್ಯ

ಅಸಂಘಟಿತ ವಲಯದ ಕಾರ್ಮಿಕರ ನೆರವಿಗೆ ಧಾವಿಸಿ: ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ

Shilpa D

fಬೆಂಗಳೂರು: ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರ ನೆರವಿಗೆ ಧಾವಿಸದೇ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಸಂಘಟಿತ ಕಾರ್ಮಿಕ ವಲಯದವರ ವಿಚಾರವಾಗಿ ಈವರೆಗೂ  ಒಂದೇ ಒಂದು ಮಾತನ್ನೂ ಆಡಿಲ್ಲ. ಲಾಕ್‌ಡೌನ್‌ನಿಂದ ವಾಹನ ಚಾಲಕರು, ಕ್ಷೌರಿಕರು, ಬಟ್ಟೆ ಹೊಲಿಯುವವರು, ಆಟೋ ಚಾಲಕರು, ಹೊಟೇಲ್ ಕಾರ್ಮಿಕರು ಸೇರಿದಂತೆ ವಿವಿಧ  ವಲಯಗಳ ವೃತ್ತಿಪರ ಕಾರ್ಮಿಕರಿಗೆ ಆದಾಯ ಇಲ್ಲದಂತಾಗಿದೆ. ಹೀಗಾಗಿ ಇವರಿಗೆ ತಿಂಗಳಿಗೆ 10 ಸಾವಿರದಂತೆ ಪ್ರೋತ್ಸಾಹ ಧನ ನೀಡಬೇಕು ಎಂದು ನಾನು ಈಗಾಗಲೇ ರಾಜ್ಯ  ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿದ್ದೇನೆ," ಎಂದರು.

ಎಲ್ಲಾ ವಿಮಾ ಕಂಪನಿಗಳು ಈ ವರ್ಗದ ಜನರು ಕಟ್ಟಬೇಕಿರುವ ವಾಹನ ಸೇರಿದಂತೆ ಇತರೆ ವಿಮಾ ಕಂತುಗಳನ್ನು ಕೆಲವು ತಿಂಗಳ ಕಾಲ ಮುಂದೂಡಬೇಕು.  ಕಳೆದ ಒಂದು ತಿಂಗಳಿಂದ ಚಾಲಕರು ತಮ್ಮ ಆಟೋ, ಟ್ಯಾಕ್ಸಿ ಓಡಿಸಿಲ್ಲ. ಇತರೆ ವೃತ್ತಿಪರ ನೌಕರರು ತಮ್ಮ ಅಂಗಡಿ ಮುಂಗಟ್ಟು ತೆರೆದಿಲ್ಲ. ಹೀಗಾಗಿ ಈ ವರ್ಗದ ಕಾರ್ಮಿಕರಿಗೆ ತಮ್ಮ ಸಂಪಾದನೆ ಇಲ್ಲದಂತಾಗಿದೆ. ಇದರಲ್ಲಿ ಅವರ ತಪ್ಪೇನು ಇಲ್ಲ. ಸರಕಾರದ ಆದೇಶವನ್ನು ಪಾಲಿಸಿದ್ದಾರೆ.

ಸೆಲೂನ್‍ಗಳು ರಾಜ್ಯಾದ್ಯಂತ ಬಂದ್ ಆಗಿವೆ. ಸವಿತಾ ಸಮಾಜದವರು ಇದರಿಂದ ತೀವ್ರ ನಷ್ಟಕ್ಕೆ ಒಳಗಾಗಿ ಬೀದಿಪಾಲಾಗುವ ಹಂತ ತಲುಪಿದ್ದಾರೆ. ಮಡಿವಾಳರು, ಕುಂಬಾರರು, ಅಕ್ಕಸಾಲಿಗರು, ಗಾಣಿಗರ ಪರಿಸ್ಥಿತಿಯೂ ಇದೇ ರೀತಿ ಆಗಿದೆ. ಏಕೆದಂರೆ ಇವರೆಲ್ಲ ದಿನವೂ ದುಡಿದು ಸಂಪಾದನೆ ಮಾಡಿ ಜೀವನ ನಡೆಸುವವರು.

ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಅಸಂಘಟಿತ ಕಾರ್ಮಿಕರು 20 ಲಕ್ಷದಷ್ಟಿದ್ದಾರೆ. ಈ ಪೈಕಿ 12 ಲಕ್ಷ ಮಂದಿಗೆ ಮಾತ್ರ ಸರ್ಕಾರ ಕಾರ್ಮಿಕ ಕಲ್ಯಾಣ ನಿಧಿಯಿಂದ ಎರಡು ಸಾವಿರ ರೂ.ಗಳ ಸಹಾಯಧನ ನೀಡಿದೆ. ಉಳಿದವರಿಗೆ ಲೈಸೆನ್ಸ್ ನವೀಕರಣವಾಗಿಲ್ಲ ಎಂಬ ನೆಪ ಹೇಳಿ ಸಹಾಯಧನ ನೀಡುತ್ತಿಲ್ಲ. ಅಸಂಘಟಿತ ವಲಯದ ಬಹುತೇಕ ಕಾರ್ಮಿಕರಿಗೆ ಯಾವುದೇ ರೀತಿಯ ನೆರವು ಸಿಕ್ಕಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಕೆಲವು ಕಾರ್ಮಿಕರಿಗೆ ಮಾತ್ರ ಆಹಾರದ ಪ್ಯಾಕೇಟ್‍ಗಳು ದೊರೆಯುತ್ತಿದೆ. ಈ ವಿಚಾರದಲ್ಲಿ ಬೆಂಗಳೂರಿಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಪಾಲಿಕೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ವರ್ತನೆ ತೋರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

SCROLL FOR NEXT