ರಾಜ್ಯ

ಉಸಿರಾಟದ ತೊಂದರೆಯಿಂದ ವ್ಯಕ್ತಿ ಸಾವು; ಕೊರೊನಾದ ವಿಧಿವಿಧಾನದಂತೆ ಶವ ಸಂಸ್ಕಾರ

Srinivasamurthy VN

ಗಂಗಾವತಿ: ಕನಕಗಿರಿ ತಾಲ್ಲೂಕಿನ ನವಲಿ ಸಮೀಪದ ವ್ಯಕ್ತಿಯೊಬ್ಬರು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದು, ಅವರನ್ನು ಜಿಲ್ಲಾಡಳಿತದ ನಿರ್ದೇಶನದ ಮೆರೆಗೆ ಕೊರೋನಾ ಸೋಂಕಿತ ವ್ಯಕ್ತಿಯಂತೆ ಪರಿಗಣಿಸಿ ಶವಸಂಸ್ಕಾರ ಮಾಡಿರುವ ಘಟನೆ ನಡೆದಿದೆ. 

ನವಲಿ ಸಮೀಪದ ಆದಾಪುರದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಮಲ್ಲನಗೌಡ ಈರನಗೌಡ (56) ಎಂಬ ವ್ಯಕ್ತಿ ಸಾವನ್ನಪ್ಪಿದ್ದು, ಮೃತ ವ್ಯಕ್ತಿಯ ಕುಟುಂಬದ ಆಯ್ದ ವ್ಯಕ್ತಿಗಳಿಗೆ ಮಾತ್ರ ಶವ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಖುದ್ದು ಆರೋಗ್ಯ ಇಲಾಖೆಯ ಸಿಬ್ಬಂದಿ  ಹಾಗೂ ಪೊಲೀಸರು ಮುಂದೆ ನಿಂತು ಕೊರೋನಾ ಪಾಸಿಟಿವ್ ಪ್ರಕರಣದಲ್ಲಿ ಹೇಗೆ ಪ್ರೋಟೊಕಾಲ್ ಅನುಸರಿಸಿ ಶವ ಸಂಸ್ಕಾರ ಮಾಡುತ್ತಾರೋ ಅದೇ ರೀತಿ ಈ ವ್ಯಕ್ತಿಯ ಸಂಸ್ಕಾರ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
 
ಕಳೆದ ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದ ಈ ವ್ಯಕ್ತಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಸಿಕೊಳ್ಳದ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದೆ. ವ್ಯಕ್ತಿ ಆಯಾಸ, ಉಸಿರಾಟದ  ಸಮಸ್ಯೆಯಿಂದ ಬಳಲುತ್ತಿದ್ದರೆ ಅಂಥವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿಬೇಕು ಎಂಬ ಸರ್ಕಾರದ ಆದೇಶ ಹಿನ್ನೆಲೆ ಇಲ್ಲಿನ ವೈದ್ಯರು ಕೊಪ್ಪಳಕ್ಕೆ ಶಿಫಾರಸ್ಸು ಮಾಡಿದ್ದಾರೆ. ಆದರೆ ರೋಗಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 

ಹೀಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದೆ. ಸರ್ಕಾರದ ಪ್ರೋಟೋಕಾಲ್ ಪ್ರಕಾರ ವ್ಯಕ್ತಿಯ ಶವಸಂಸ್ಕಾರ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

SCROLL FOR NEXT