ರಾಜ್ಯ

ಜಪ್ತಿ ಮಾಡಲಾದ ವಾಹನ ಮೇ 1ರಿಂದ ಹಿಂದಿರುಗಿಸಲಾಗುವುದು: ಭಾಸ್ಕರ್ ರಾವ್

Nagaraja AB

ಬೆಂಗಳೂರು: ಲಾಕ್ ಡೌನ್ ಜಾರಿಯಾದಾಗಿನಿಂದಲೂ ಜಪ್ತಿ ಮಾಡಲಾದ ವಾಹನಗಳನ್ನು ನಾಳೆಯಿಂದ ಹಿಂದಿರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಕೊರೋನಾ ಸೋಂಕು ನಿಯಂತ್ರಿಸಲು ಜಾರಿಯಾಗಿದ್ದ ಲಾಕ್ ಡೌನ್ ಉಲ್ಲಂಘಿಸಿ ಸುಖಾ ಸುಮ್ಮನೇ ರಸ್ತೆಗಳಿದಿದ್ದ ವಾಹನಗಳನ್ನು ಸಿಲಿಕಾನ್ ಸಿಟಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಅಲ್ಲದೇ, ಲಾಕ್ ಡೌನ್ ಮುಗಿಯುವವರೆಗೂ ವಾಹನಗಳನ್ನು ವಾಪಸ್ಸು‌ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದರು. 

ಈ ವಿಷಯ ತಿಳಿಯುತ್ತಿದ್ದಂತೆ ವಾಹನ ಸವಾರರು ಇನ್ನು ಲಾಕ್ ಡೌನ್ ಎಷ್ಟು ದಿನಗಳವರೆಗೆ ಇರುತ್ತೋ, ಠಾಣೆಯಲ್ಲೇ ವಾಹನ ಬಿಟ್ಟು ಅಗತ್ಯ ಸಮಯದಲ್ಲಿ ಸಂಚಾರ ಹೇಗೆ ಮಾಡುವುದು ಎಂದು ಕಂಗಾಲಾಗಿದ್ದರು. ಅಲ್ಲದೇ, ಜಪ್ತಿ ಮಾಡಿದ್ದ ವಾಹನಗಳನ್ನು ಕೋರ್ಟ್ ಮೂಲಕವೇ ವಾಪಸ್ಸು ಬಿಡಿಸಿಕೊಳ್ಳಬೇಕು ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸವಾರರು ಮತ್ತಷ್ಟು ಆತಂಕಕ್ಕೀಡಾಗಿದ್ದರು.  ಆದರೀಗ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್‌ ಅವರು ಇದಕ್ಕೆ ತಿಲಾಂಜಲಿ ಹಾಡಿದ್ದಾರೆ

ಈ ಕುರಿತು ಟ್ವೀಟ್‌ ಮಾಡಿರುವ ಆಯುಕ್ತರು, ಲಾಕ್‌ಡೌನ್ ಆರಂಭದ ದಿನಗಳಲ್ಲಿ ಸೀಜ್‌ ಆಗಿರುವ ವಾಹನಗಳನ್ನು ಮೇ 1ರಿಂದ ವಾಪಸ್‌ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ, ಗೃಹ ಸಚಿವರ ಅನುಮತಿ ಮೇರೆಗೆ ವಾಹನಗಳ ವಾಪಸ್ಸು ನೀಡುತ್ತೇವೆ. ಆದರೆ, ಅದಕ್ಕೂ ಮುನ್ನ ವಾಹನಗಳ ದಾಖಲೆ ಪರಿಶೀಲಿಸಿ, ವಾಪಸ್ಸು ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಲಾಕ್ ಡೌನ್ ನಿಂದಾಗಿ 47,000 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಸದ್ಯ ವಾಹನಗಳನ್ನು ಹಿಂದಿರುಗಿಸಲು ನಿರ್ಧರಿಸಲಾಗಿದೆ. ಆಯಾ ಠಾಣೆಯಲ್ಲಿ ವಾಹನಗಳನ್ನು ವಾಪಸ್ಸು ನೀಡಲಾಗುವುದು. ಆದರೆ, ಅದಕ್ಕೂ ಮುನ್ನ ಎನ್‌ಡಿಎಂಎ ಕಾಯ್ದೆಯನ್ವಯ ಶುಲ್ಕ ವಸೂಲಿ ಮಾಡಲಾಗುವುದು. ಮೊದಲು ಜಪ್ತಿ ಮಾಡಿದ ವಾಹನಗಳನ್ನು ಮೊದಲು ನೀಡುತ್ತೇವೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

SCROLL FOR NEXT