ರಾಜ್ಯ

ಸಿಎಂ ವಿರುದ್ಧ ಪೋಸ್ಟ್: ಚಿಕ್ಕಮಗಳೂರಿನ ಉಪನ್ಯಾಸಕನ ಅಮಾನತು

Lingaraj Badiger

ಚಿಕ್ಕಮಗಳೂರು/ರಾಯಚೂರು: ಕೊವಿಡ್‌ -19 ವಿಷಯದಲ್ಲಿ ಮುಖ್ಯಮಂತ್ರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಚಿಕ್ಕಮಗಳೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರೊಬ್ಬರನ್ನು ಅಮಾನತು ಮಾಡಲಾಗಿದೆ.

ಬಿ.ಎಸ್.ಮಂಜುನಾಥ್ ಅಮಾನತುಗೊಂಡ ಉಪನ್ಯಾಸಕ. ಚಿಕ್ಕಮಗಳೂರು ನಗರದ ಸರಕಾರಿ ಪದವಿ ಪೂರ್ವಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾಗಿರುವ ಇವರನ್ನು ಅಮಾನತುಗೊಳಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಶಿಸ್ತು ಪ್ರಾಧಿಕಾರ ಆದೇಶ ಹೊರಡಿಸಿದೆ.

"ಹಲೋ ಸಿಎಂ ಸಾಹೇಬ್ರೆ ಫ್ರೀ ಇದ್ದೀರಾ..!, ಕೊರೋನಾ ಪರಿಹಾರಕ್ಕೆ ಜನರ ಹತ್ತಿರ ದುಡ್ಡು ಕೇಳ್ತಿದ್ದೀರಿ, ದುಡ್ಡು ಎಲ್ಲಿದೆ ಅಂತ ಲಿಸ್ಟ್ ಇಲ್ಲಿದೆ ನೋಡಿ..!" ಎಂದು ಮುಖ್ಯಮಂತ್ರಿ ವಿರುದ್ಧ ಆಡಿಯೋ ಕ್ಲಿಪ್ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಆರೋಪದ ಮೇಲೆ ಮಂಜುನಾಥ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ರಾಯಚೂರಿನಲ್ಲಿ ಕೊರೊನಾ ಸೋಂಕು ಹರಡುವ ವೇಳೆ ಶಾಸಕರು, ಸಂಸದರು ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟಿದ್ದ ಯುವಕನನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ತಾಲೂಕಿನ ಸಿಂಗನೋಡಿ ಗ್ರಾಮದ ತಿಮ್ಮಪ್ಪ ಬಂಧಿತ ಆರೋಪಿಯಾಗಿದ್ದು ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕೊರೋನಾ ವೈರಸ್ ಸಂಕಷ್ಟ ಬಂದಾಗಿನಿಂದ ಶಾಸಕರು, ಸಂಸದರು ಕಾಣೆಯಾಗಿದ್ದಾರೆ. ನಿಮಗೆ ಎಲ್ಲಾದರೂ ಕಾಣಿಸಿದರೆ ದಯವಿಟ್ಟು ಕ್ಷೇತ್ರಕ್ಕೆ ಕಳುಹಿಸಿ ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಫೋಟೋ ಹಾಕಿ ಹರಿಬಿಟ್ಟ ಪೋಸ್ಟ್ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರ ಕೈಗೆ ಓರ್ವ ಯುವಕ ಸಿಕ್ಕಿಬಿದ್ದಿದ್ದಾನೆ.

ಬಿಜೆಪಿ ಸಂಸದರ ಫೋಟೋಗಳ ಪೋಸ್ಟ್ ಅನ್ನು ಎಡಿಟ್ ಮಾಡಿ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ ಫೋಟೋ ಹಾಕಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟ ಯುವಕನನ್ನು ಬಂಧಿಸಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಬೆಳಗ್ಗೆಯಿಂದ ಯುವಕನನ್ನ ಠಾಣೆಯಲ್ಲಿ ಕೂಡಿ ಹಾಕಿದ್ದು, ಪ್ರಕರಣವನ್ನೂ ದಾಖಲಿಸುತ್ತಿಲ್ಲ, ಹೊರಗಡೆಯೂ ಬಿಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

SCROLL FOR NEXT