ರಾಜ್ಯ

ಕೊರೋನಾ: ಕಂಗಾಲಾಗಿರುವ ಕಲಬುರಗಿ ವೈದ್ಯರ ನೆರವಿಗೆ ತೆರಳಲಿರುವ ಬೆಂಗಳೂರು ತಜ್ಞರು

Manjula VN

ಬೆಂಗಳೂರು: ಕಲಬುರಗಿಯಲ್ಲಿ ಕೊರೋನಾ ವೈರಸ್ ಅಬ್ಬರ ಹೆಚ್ಚಾಗುತ್ತಲೇ ಇದ್ದು ಬುಧವಾರ ಒಂದೇ ದಿನ 8 ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಂತೆ ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ ಅರ್ಧಶತಕ ದಾಟಿದೆ. ಕೇವಲ ಸೋಂಕಿತ ಸಂಖ್ಯೆಯಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿಯೇ ಇದೆ. ಆದರೆ, ಗುಣಮುಖರಾಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯೇ ಇದೆ. 

52 ಮಂದಿ ಸೋಂಕಿತರ ಪೈಕಿ ಜಿಲ್ಲೆಯಲ್ಲಿ ಕೇವಲ 7 ಮಂದಿ ಮಾತ್ರ ಗುಣಮುಖರಾಗಿದ್ದು, ಬೆಂಗಳೂರು, ಮೈಸೂರು ಮತ್ತು ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ಕಲಬುರಗಿಯಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಈ ಬಗ್ಗೆ ಸರ್ಕಾರ ಗಮನ ಹರಿಸಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಬೆಂಗಳೂರು ತಜ್ಞರು ನೆರವು ನೀಡಲಿದ್ದಾರೆಂದು ತಿಳಿದುಬಂದಿದೆ. 

ಕಲಬುರಗಿಯ ಇಎಸ್ಐ ಆಸ್ಪತ್ರೆಯ ಐಸಿಯುವಿನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರೊಂದಿಗೆ ಬೆಂಗಳೂರು ನಗರದ ವೈದ್ಯರು ಕೈಜೋಡಿಸಿ ಅಗತ್ಯ ಸಹಾಯಗಳನ್ನು ಮಾಡಲಿದ್ದಾರೆಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜವೈದ್ ಅಖ್ತರ್ ಅವರು ಹೇಳಿದ್ದಾರೆ. 

ಚಿಕಿತ್ಸೆಯನ್ನು ಬಲಪಡಿಸುವುದರ ಜೊತೆಯೇ ಕಂಟೈನ್ಮೆಂಟ್ ಜೋನ್ ಗಳ ಬಲವನ್ನೂ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಮಾತನಾಡಿರುವ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸ್ಥಿತಿ ಸುಧಾರಿಸುವವರೆಗೂ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿರುವ ಅಧಿಕಾರಿಗಳು ಹಾಗೂ ತಜ್ಞರು ಪರಿಸ್ಥಿತಿಯನ್ನು ಅವಲೋಕನ ನಡೆಸಲಿದ್ದಾರೆಂದಿದ್ದಾರೆ. 

ಜಿಲ್ಲಾ ಆಡಳಿತ ಮಂಡಳಿ ಸೋಂಕಿತ ವ್ಯಕ್ತಿಯೊಂದಿಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿರುವವರನ್ನು ಹುಡುಕಾಡುತ್ತಿದ್ದು, ಕ್ವಾರಂಟೈನ್ ನಲ್ಲಿರಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವವರಲ್ಲೇ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ ಎಂದು ತಿಳಿಸಿದ್ದಾರೆ. 

SCROLL FOR NEXT