ರಾಜ್ಯ

ಸಾಂಪ್ರದಾಯಿಕ ವಿಧಾನ ಹೋಯ್ತು, ಈಗ ಹೊಲ-ಗದ್ದೆಗಳಲ್ಲಿ ಮೀನುಗಾರಿಕೆ ಶುರುವಾಯ್ತು!

Nagaraja AB

ಗಂಗಾವತಿ: ಬಹುತೇಕ ಮೀನುಗಾರಿಕೆ ಎಲ್ಲಿ ನಡೆಯುತ್ತೆ..? ನಾವು ನೀವು ಕೇಳಿದಂತೆ, ನೋಡಿದಂತೆ ಹಳ್ಳ-ಕೊಳ್ಳ,  ಕಾಲುವೆ, ನದಿ, ಸಾಗರ, ಕೆರೆ, ನೀರಿನ ಹೊಂಡ ಇತ್ಯಾದಿಗಳಲ್ಲಿ ನಡೆಯುತಿತ್ತು. ಆದರೆ ಬದಲಾದ ಕಾಲದಲ್ಲಿ ಈಗ ಹೊಲಗದ್ದೆಗಳಲ್ಲಿನ ವಿಶಾಲ ತೆರೆದ ಮೈದಾನದಲ್ಲಿ ಮೀನುಗಾರಿಕೆ ಮಾಡಬಹುದಂತೆ..!

ತೋಟ, ನಾಟಿ ಮಾಡಿದ ಹೊಲಗದ್ದೆಗಳಲ್ಲಿ ಮೀನುಗಾರಿಕೆ ಮಾಡುವ ವಿಧಾನ ಇದೀಗ ಅಸ್ತಿತ್ವಕ್ಕೆ ಬಂದಿದೆ. ಇದು  ಹೇಗೆಲ್ಲಾ ಸಾಧ್ಯ ಎನ್ನುವುದು ಕುತೂಹಲ ಇದ್ದರೆ ಈ ಸ್ಟೋರಿಯನ್ನೊಮ್ಮೆ ನೋಡಿ. ನಿಮಗೆ ಗೊತ್ತಾಗುತ್ತದೆ. ಹೌದು ಇದೀಗ ಗಂಗಾವತಿ ತಾಲ್ಲೂಕಿನಲ್ಲಿ ರೈತರು ತಮ್ಮ ಹೊಲಗದ್ದೆಗಳಲ್ಲಿಯೂ ಮೀನು ಹಿಡಿಯುತ್ತಿದ್ದಾರೆ.

ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆನೆಗೊಂದಿ ಪರಿಸರದಲ್ಲಿನ ಬೆಟ್ಟಗುಡ್ಡಗಳಿಂದ ಧುಮುಕ್ಕುತ್ತಿರುವ ನೀರು ಸಮೀಪದ ನಾಲೆಗಳಿಗೆ ಸೇರುತ್ತಿದೆ. ಭರ್ತಿಯಾಗುತ್ತಿರುವ ನೀರಿನಿಂದಾಗಿ ನಾಲೆಗಳು ಅಲ್ಲಲ್ಲಿ ಒಡೆದು, ಕೊಚ್ಚಿ ಹೋಗಿ ಹೆಚ್ಚುವರಿ ನೀರು ಹೊಲಗದ್ದೆಗಳಿಗೆ ಹೋಗುತ್ತಿದೆ.

ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಬಿಡುಗಡೆ ಮಾಡಿರುವ ನೀರಿನಲ್ಲಿ ಮೀನು ಮತ್ತು ಮರಿಗಳಿದ್ದು, ಹೀಗೆ  ಒಡೆದ ಕಾಲುವೆಯಿಂದ ಹರಿಯುತ್ತಿರುವ ನೀರು ಗದ್ದೆಗಳತ್ತ ಮುಖಮಾಡುತ್ತಿದ್ದು, ನೀರಿನ ಪ್ರವಾಹಕ್ಕೆ ಮೀನು ಮತ್ತು ಮರಿಗಳು ಹೊಲಕ್ಕೆ ಹರಿಯುತ್ತಿವೆ.

ರೈತರು ಕೂತುಲಹದಿಂದ ಮೀನುಗಳನ್ನು ಹಿಡಿದು ಸಂಗ್ರಹಿಸಿ ಮನೆಗೆ ಒಯ್ಯುತ್ತಿದ್ದಾರೆ.ಮೀನು ಹಿಡಿಯದೇ ಹೋದರೆ ಮಣ್ಣಿನಲ್ಲಿ ಸಿಕ್ಕಿ ಸಾವನ್ನಪ್ಪುವ ಸಂಭವವಿದ್ದು,ಸುತ್ತಲಿನ ಪರಿಸರದಲ್ಲಿ ದುರ್ನಾತಕ್ಕೆ  ಕಾರಣವಾಗುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ ರೈತರು ಕೃಷಿಯ ಜೊತೆಗೆ ಮೀನುಗಾರಿಕೆ ಮಾಡುತ್ತಿದ್ದಾರೆ.

'ಕಾಲುವೆಯಲ್ಲಿ ಹರಿಯುತ್ತಿರುವ ನೀರಿನ ರಭಸದೊಂದಿಗೆ ಸಣ್ಣ ಪ್ರಮಾಣದ ಮೀನುಗಳು ಹೊಲಗದ್ದೆಯತ್ತ ಈಜಿಕೊಂಡು ಬರುತ್ತಿವೆ. ಹೀಗಾಗಿ ರೈತರಿಗೆ ಇದೊಂದು ರೀತಿಯ ಮೋಜಿನಂತಾಗಿದೆ. ಕೈ ಸಿಕ್ಕುವ ವಸ್ತುಗಳನ್ನೆ  ಬಲೆಯಂತೆ ಮಾಡಿಕೊಂಡು ಮೀನು ಹಿಡಿಯಲಾಗುತ್ತಿದೆ' ಎನ್ನುತ್ತಾರೆ ರೈತ ಸತೀಷ್ ಗೊಂಡಾ.
ವರದಿ: ಎಂ.ಜೆ. ಶ್ರೀನಿವಾಸ್

SCROLL FOR NEXT