ರಾಜ್ಯ

ಬಿಜೆಪಿ ನಾಯಕನ ಅಂತ್ಯಕ್ರಿಯೆ ನೆರವೆರಿಸಿದ ಪಿಎಫ್ಐ, ಸೈದ್ದಾಂತಿಕ ಭಿನ್ನತೆ ಬದಿಗಿಟ್ಟು ಮಾದರಿಯಾದ ಸಂಘಟನೆ

Lingaraj Badiger

ಗಂಗಾವತಿ: ಪಾಫ್ಯುಲರ್ ಫ್ರಂಟ್ ಅಫ್ ಇಂಡಿಯಾ ಹೇಳಿಕೇಳಿ ಎಡ ಪಂಥಿಯ ಸಂಘಟನೆ. ಬಲ ಪಂಥಿಯ ಬಿಜೆಪಿಗೂ ಪಿಎಫ್ಐಗೂ ಸೈದ್ದಾಂತಿಕವಾಗಿ ಬದ್ಧ ವಿರೋಧಿಗಳು. ಆದರೆ ಮಾನವೀಯತೆ ಮತ್ತು ಸಮಾಜ ಸೇವೆಯ ಸಂದರ್ಭದಲ್ಲಿ ತಾತ್ವಿಕ ಭಿನ್ನಭಿಪ್ರಾಯಗಳನ್ನು ಬದಿಗಿಟ್ಟ ಈ ಸಂಘಟನೆ ಮಾಡಿದ ಕೆಲಸ ಇದೀಗ ಸಾರ್ವಜನಿಕರಲ್ಲಿ ಪ್ರಶಂಸೆಗೆ ಕಾರಣವಾಗಿದೆ. 

ಕೊರೋನಾ ಪಾಸಿಟಿವ್ ಸೋಂಕಿನಿಂದ ಸಾವನ್ನಪ್ಪಿದ ಬಿಜೆಪಿಯ ಹಿರಿಯ ಮುಖಂಡ ಸೋಮಶೇಖರಗೌಡ ಅವರ ಅಂತ್ಯಕ್ರಿಯೆಯನ್ನು ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರು ನಗರದಲ್ಲಿ ನೆರವೇರಿಸುವ ಮೂಲಕ ಸೈದ್ದಾಂತಿಕ ಭಿನ್ನಾಭಿಪ್ರಾಯಕ್ಕೆ ತಿಲಾಂಜಲಿ ಇಟ್ಟು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಈ ಕುರಿತು ಮಾತನಾಡಿದ ಪಾಪುಲರ್ ಪ್ರಂಟ್ ಅಫ್ ಇಂಡಿಯಾದ ಜಿಲ್ಲಾಧ್ಯಕ್ಷ ಝಾಹೀರ್ ಅಬ್ಬಾಸ್, 'ಸೋಂಕಿನ ಕುರಿತಾಗಿ ಈಗಾಗಲೇ ಜನ ಸಮುದಾಯದಲ್ಲಿ ಹಲವಾರು ತಪ್ಪು ಕಲ್ಪನೆ ಹರಿದಾಡುತ್ತಿವೆ. ಅದರಲ್ಲೂ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಕುರಿತು ಜನರಲ್ಲಿ ಹಲವು ತಪ್ಪು ಕಲ್ಪನೆ ಮತ್ತು ಭೀತಿಯ ವಿಚಾರ ಮನೆಮಾಡಿವೆ.

ಮೃತಪಟ್ಟ ಸೋಂಕಿತರ ಅಂತ್ಯಸಂಸ್ಕಾರ ಮಾಡುವುದೇ ಸವಾಲಿನ ವಿಚಾರ. ಇದನ್ನು ಮನಗಂಡ ಪಿಎಫ್ಐ ಸದಸ್ಯರು ಮೃತರ ಕುಟುಂಬದ ಅನುಮತಿ, ಜಿಲ್ಲಾಡಳಿತದ ಸೂಚನೆ ಮೆರೆಗೆ ಕೋವಿಡ್ ವಿಧಾನ ಅನುಸರಿಸಿ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಆಯ್ದ ಸಂಖ್ಯೆಯ ಜನರ ಮಧ್ಯೆ ಅಂತ್ಯಕ್ರಿಯೆ ಮಾಡಲಾಗಿದೆ' ಎಂದರು.

ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಕಾರ್ಯದಶರ್ಶಿ ಅಬ್ದುಲ್ ಫಯಾಜ್, ಕಾರ್ಯಕರ್ತರಾದ ಯಾಸಿನ್, ಅಬ್ದುಲ್ ಆಲಂ, ಶ್ಯಾಮಿದ್ ರಝಿ, ರಾಜಹುಸೇನ್ ಅಜುರುದ್ದಿನ್ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನೆರವೇರಿಸಿದರು. ಜಿಲ್ಲಾಡಳಿತ ಸೂಚನೆ ಹಿನ್ನೆಲೆ ಬಿಜೆಪಿಯ ಕೆಲವರು, ಕುಟುಂಬ ಸದಸ್ಯರು ಹಾಗೂ ಮೃತರ ಆತ್ಮೀಯರು ಬೆರಳೆಣಿಕೆಯಷ್ಟು ಜನ ಮಾತ್ರ ಪಾಲ್ಗೊಂಡಿದ್ದರು.

ಕೊರೋನಾ ಸೋಂಕಿತರ ಅಂತ್ಯಕ್ರಿಯೆಗೆ ಬಹುತೇಕ ಕುಟುಂಬಗಳು ಹಿಂದೇಟು ಹಾಕುತ್ತಿರುವ ಈ ಸನ್ನಿವೇಶದಲ್ಲಿ ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಪದಾಧಿಕಾರಿಗಳು ತಮ್ಮ ಪ್ರಾಣ ಒತ್ತೆಯಿಟ್ಟು ಸಮಾಜ ಸೇವೆಗೆ ನಿಂತಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗುತ್ತಿದೆ.

-ಶ್ರೀನಿವಾಸ್ .ಎಂ.ಜೆ

SCROLL FOR NEXT