ರಾಜ್ಯ

ಕೊರೋನಾ ಸೋಂಕು ಇದ್ದರೂ ಆಸ್ಪತ್ರೆಯಿಂದಲೇ ಸಿಎಂ ಯಡಿಯೂರಪ್ಪ ಕೆಲಸ

Manjula VN

ಬೆಂಗಳೂರು: ಕೊರೋನಾ ಸೋಂಕಿಗೊಳಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಸ್ಪತ್ರೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಎಲ್ಲಾ ಕಚೇರಿಗಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಸರ್ಕಾರಿ ಕೆಲಸಗಳಿಗೆ ಅಡ್ಡಿಯಾದಂತೆ ಸೂಚನೆ ನೀಡಿದ್ದೇನೆ ಎಂದು ವಿಡಿಯೋ ಸಂದೇಶದಲ್ಲಿ ಯಡಿಯೂರಪ್ಪ ಅವರು ಹೇಳಿದ್ದಾರೆ. 

ಮುಖ್ಯ ಕಾರ್ಯದರ್ಶಿ ಟಿಎಂ. ವಿಜಯ್ ಭಾಸ್ಕರ್ ಅವರು ಮಾತನಾಡಿ, ಆಸ್ಪತ್ರೆಯಿಂದಲೇ ಮುಖ್ಯಮಂತ್ರಿಗಳು ಕರ್ತವ್ಯನಿರ್ವಹಿಸುತ್ತಿದ್ದಾರೆ. ಫೋನ್ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲಿದ್ದಾರೆ. ಆಸ್ಪತ್ರೆಯ ಕೊಠಡಿಯಲ್ಲಿಯೇ ವಿಡಿಯೋ ಕಾನ್ಪರೆನ್ಸ್ ಲಿಂಕ್ ಸ್ಥಾಪಿಸುವ ಸಾಧ್ಯತೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವ್ಯವಸ್ಥೆ ಕಲ್ಪಿಸಲು ಕೊಠಡಿಗೆ ಬರುವ ವ್ಯಕ್ತಿ ಪಿಪಿಇ ಸೂಟ್ ಧರಿಸಿ ವಾರ್ಡ್ ಒಳಗೆ ಇರಬೇಕಾದ ಅವಶ್ಯಕತೆ ಇದೆ. ಈ ಎಲ್ಲಾ ಆಯಾಮಗಳ ಕುರಿತಂತೆ ಚಿಂತನೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. 

ಆಸ್ಪತ್ರೆಗೆ ದಾಖಲಾದ ಮೊದಲ ದಿನವೇ ಯಡಿಯೂರಪ್ಪ ಅವರು ಹಿರಿಯ ನಾಯಕರು ಹಾಗೂ ಅಧಿಕಾರಿಗಳೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡುವುದರಲ್ಲಿ ಬಿಝಿಯಾಗಿದ್ದರು. ಅಲ್ಲದೆ, ಸಾಕಷ್ಟು ಪರೀಕ್ಷೆಗಳನ್ನು ಯಡಿಯೂರಪ್ಪ ಅವರಿಗೆ ನಡೆಸಲಾಯಿತು. ಆಸ್ಪತ್ರೆಗೆ ದಾಖಲಾಗುವ ವೇಳೆ ಯಡಿಯೂರಪ್ಪ ಅವರು ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಅವರ ಆತ್ಮಚರಿತ್ರೆ ಪುಸ್ತಕಗಳನ್ನು ಸೇರಿದಂತೆ ತಮ್ಮೊಂದಿಗೆ 10 ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಫ್ರೀಯಾಗಿದ್ದ ಸಂದರ್ಭದಲ್ಲಿ ಪುಸ್ತಕ ಓದುವ ಮೂಲಕ ಕಾಲ ಕಳೆಯಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

SCROLL FOR NEXT