ರಾಜ್ಯ

ನನಗೆ ಯಾವುದೇ ತೊಂದರೆ ಇಲ್ಲ, ಶೀಘ್ರ ಗುಣಮುಖನಾಗಿ ಹೊರಬರಲಿದ್ದೇನೆ: ಆಸ್ಪತ್ರೆಯಿಂದ ಸಿಎಂ ಯಡಿಯೂರಪ್ಪ ವಿಡಿಯೋ ಸಂದೇಶ

Manjula VN

ಬೆಂಗಳೂರು: ನನಗೆ ಯಾವುದೇ ತೊಂದರೆ ಇಲ್ಲ. ಶೀಘ್ರ ಗುಣಮುಖನಾಗಿ ಹೊರಬರಲಿದ್ದೇನೆ. ಯಾರೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶವನ್ನು ರವಾನಿಸಿದ್ದಾರೆ. 

ನನ್ನ ಆರೋಗ್ಯದ ಕುರಿತು ಯಾರೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಅಲ್ಲದೆ, ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಸರ್ಕಾರಿ ಕೆಲಸಗಳಿಗೆ ಅಡ್ಡಿಯಾದಂತೆ ಸೂಚನೆ ನೀಡಿದ್ದೇನೆ. ಅಲ್ಲದೇ, ಮಠಾಧಿಪತಿಗಳು ಸಹ ಆಶೀರ್ವಾದ ಮಾಡಿದ್ದಾರೆಂದು ಹೇಳಿದ್ದಾರೆ. 

ಯಾರೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಆದಷ್ಟು ಬೇಗ ಹೊರಬಂದು ಕೆಲಸದಲ್ಲಿ ತೊಡಗಲಿದ್ದೇನೆ. ರಾಜ್ಯದ ಜನತೆಯ ಆಶೀರ್ವಾದ, ಬೆಂಬಲ ಸದಾ ನನ್ನ ಮೇಲಿರಲಿ. ನನಗೆ ನಾಡಿನ ಜನರ ಆರೋಗ್ಯ ಮುಖ್ಯ. ದಯಮಾಡಿ ವ್ಯಕ್ತಿಗ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಆಗ ಮಾತ್ರ ಕೊರೋನಾದಿಂದ ಪಾರಾಗಲು ಸಾಧ್ಯ ಎಂದು ತಿಳಿಸಿದ್ದಾರೆ. 

ಈ ನಡುವೆ ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿಯವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. 

ಮುಖ್ಯಮಂತ್ರಿಗಳ ಆರೋಗ್ಯ ಕುರಿತು ಹೇಳಿಕೆ ನೀಡಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯರು, ಯಡಿಯೂರಪ್ಪ ಅವರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡವು ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದೆ. ಅವರು ಆರೋಗ್ಯವಾಗಿದ್ದಾರೆ. ವಿವಿಧ ವಿಭಾಗದ ತಜ್ಞನ ವೈದ್ಯರ ತಂಡವು ಅವರಿಗೆ ಚಿಕಿತ್ಸೆ ನೀಡುತ್ತಿದೆ. ಯಡಿಯೂರಪ್ಪ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದು, ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ. 

ಇನ್ನು ಯಡಿಯೂರಪ್ಪ ಅವರಲ್ಲಿ ಕೊರೋನಾ ದೃಢಪಟ್ಟ ಬೆನ್ನಲ್ಲೇ ಅವರ ನಿವಾಸದ ಎಲ್ಲರನ್ನೂ ಸೋಮವಾರ ಪರೀಕ್ಷೆಗೆ ಒಳಪಡಿಸಲಾಗಿದೆ. ಯಡಿಯೂರಪ್ಪ ಪುತ್ರಿ ಪದ್ಮಾವತಿ ಹಾಗೂ 9 ಸಿಬ್ಬಂದಿಗೆ ಸೋಂಕು ಪತ್ತೆಯಾಗಿದೆ. ಇದೇ ವೇಳೆ ವಿಜಯೇಂದ್ರಗೆ ನೆಗೆಟಿವ್ ಬಂದಿದೆ. ಆದರೂ ಅವರು ಕ್ವಾರಂಟೈನ್'ಗೆ ಒಳಗಾಗಿದ್ದಾರೆ. 

SCROLL FOR NEXT