ರಾಜ್ಯ

21 ಜಿಲ್ಲೆಗಳ ಗ್ರಾಮ ಪಂಚಾಯತ್  ಚುನಾವಣಾ ಮೀಸಲಾತಿ ಪಟ್ಟಿ ಸಿದ್ಧ: ಹೈಕೋರ್ಟ್ ಗೆ ಆಯೋಗದ ಮಾಹಿತಿ

Shilpa D

ಬೆಂಗಳೂರು: ಮೀಸಲು ಪ್ರಕ್ರಿಯೆ ಪೂರ್ಣಗೊಂಡಿರುವ 21 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಬಹುದೆಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಈ ಬಗ್ಗೆ ನಿಲುವು ತಿಳಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.

ಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಕೆ.ಸಿ. ಕೊಂಡಯ್ಯ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾ. ಎ.ಎಸ್‌. ಓಕಾ‌ ಹಾಗೂ ನ್ಯಾ. ಅಶೋಕ್‌ ಎಸ್‌. ಕಿಣಗಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. 

ಈಗಾಗಲೇ ರಾಜ್ಯದ 21 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳ ಮೀಸಲನ್ನು ಪ್ರಕಟಿಸಲಾಗಿದೆ. ಇನ್ನುಳಿದ 9 ಜಿಲ್ಲೆಗಳ ಪೈಕಿ ಎಂಟು ಜಿಲ್ಲೆಗಳಲ್ಲಿ  ಆ.11ಕ್ಕೆ ಮೀಸಲು ಪ್ರಕಟಿಸಲಾಗುವುದು. ಬೆಂಗಳೂರು ನಗರ ಜಿಲ್ಲಾಡಳಿತ ಆ.24ರವರೆಗೆ ಸಮಯ ಕೇಳಿದೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಮತದಾರರ ಪಟ್ಟಿ ಅಂತಿಮಗೊಳಿಸಲಾಗುವುದು ಆಯೋಗದ ಪರ ಕೆ.ಎನ್‌. ಫಣೀಂದ್ರ ಹೇಳಿದ್ದಾರೆ.

ಎರಡೂ ಕಡೆ ವಾದ ಆಲಿಸಿದ ಬಳಿಕ ನ್ಯಾಯಪೀಠ ''21 ಜಿಲ್ಲೆಗಳ ಮೀಸಲು ಪ್ರಕಟಿಸಲಾಗಿದ್ದು, ಆಗಸ್ಟ್‌ ಅಂತ್ಯಕ್ಕೆ ಇನ್ನುಳಿದ ಜಿಲ್ಲೆಗಳ ಮೀಸಲು ಅಂತಿಮಗೊಳ್ಳಲಿದೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಮತದಾರರ ಪಟ್ಟಿ ಅಂತಿಮಗೊಳ್ಳಲಿದೆ. ಹಾಗಾಗಿ, ಆ 21 ಜಿಲ್ಲೆಗಳ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಕ್ರಮ ಕೈಗೊಳ್ಳಬಹುದಲ್ಲವೇ,'' ಎಂದು ಚುನಾವಣಾ ಆಯೋಗವನ್ನು ಕೇಳಿತು.
 

SCROLL FOR NEXT