ರಾಜ್ಯ

ಕರಾವಳಿ, ಮಲೆನಾಡಿನಲ್ಲಿ ಭರ್ಜರಿ ಮಳೆ: ಪ್ರವಾಹ ಪರಿಸ್ಥಿತಿ, ಮತ್ತಷ್ಟು ಮಳೆಯಾಗುವ ಸಾಧ್ಯತೆ, ಹಲವೆಡೆ ರೆಡ್ ಅಲರ್ಟ್ ಘೋಷಣೆ

Manjula VN

ಬೆಂಗಳೂರು: ರಾಜ್ಯದ ಕರಾವಳಿ, ಮಲನೆನಾಡು ಸೇರಿ ಹಲವೆಡೆ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದು, ಪ್ರವಾಹದ ಆತಂಕ ಶುರುವಾಗಿದೆ. ಇನ್ನೂ ಮೂರು ದಿನ ರಾಜ್ಯದಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಗಳಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಹಾಗೂ ಮನೆನಾಡಿನ ಜಿಲ್ಲಾಡಳಿತಗಳು ರೆಡ್ ಅಲರ್ಟ್ ಘೋಷಣೆ ಮಾಡಿವೆ. 

ಭಾರೀ ಮಳೆ ಪರಿಣಾಮ ಕಾವೇರಿ ಲಕ್ಷ್ಮಣ ತೀರ್ಥ, ಅಘನಾಶಿನಿ, ಭದ್ರಾ ಸೇರಿ ಹಲವು ನದಿಗಳು ಅಪಾಟಮಟ್ಟ ಮೀರಿ ಹರಿಯುತ್ತಿದ್ದು, ಈಗಾಗಲೇ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು, ಲಕ್ಷಾಂತರ ರುಪಾಯಿಗಳ ಬೆಳೆಹಾನಿಯಾಗಿದೆ. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿಯುವ ಮೂಲಕ ಮತ್ತೊಂದು ಮತ್ತೆ ಸ್ಥಳೀಯರಲ್ಲಿ ಕಳೆದೆರಡು ವರ್ಷಗಳ ಮಹಾಮಳೆಯ ದುರಂತ ನೆನಪಾಗುವಂತೆ ಮಾಡಿದೆ. 

ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತುರ್ತು ಸಂದರ್ಭಕ್ಕಾಗಿ ಕೂಡಲೇ ರೂ.50 ಕೋಟಿ ಬಿಡುಗಡೆಗೊಳಿಸುವಂತೆ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಸಿಎಂ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ. 

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಯಡಿಯೂರಪ್ಪ ಅವರು ಅಲ್ಲಿಂದಲೇ ಆಡಳಿತ ನಿರ್ವಹಣೆ ಮುಂದುವರೆಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಬುಧವಾರ ಮಳೆ ಪರಿಸ್ಥಿತಿ ಕುರಿತು ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. 

ಈ ನಡುವೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ಬುಧವಾರ ಆಯಾ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಪರಿಸ್ಥಿತಿ ಅವಲೋಕನ ನಡೆಸಿದರು. 

ಹೋಮ್ ಕ್ವಾರಂಟೈನ್ ನಲ್ಲಿರುವ ಅವರು 11 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. 

ಇನ್ನೂ ಮೂರು ದಿನ ಮಳೆ ಸಾಧ್ಯತೆ
ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ 3 ದಿನಗಳ ಕಾಲ ಭಾರೀ ಮಳೆ ಸುರಿಯಲಿದ್ದು, ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಂಗಳವಾರದಿಂದಲೇ ಮುಂಗಾರು ತೀವ್ರ ಸ್ವರೂಪ ಪಡೆದುಕೊಂಡು ತನ್ನ ಆರ್ಭಟವನ್ನು ಮುಂದುವರೆಸುತ್ತಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. 

SCROLL FOR NEXT