ರಾಜ್ಯ

ರಾಜ್ಯದಲ್ಲಿ ವರುಣನ ಆರ್ಭಟ: ಆರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ, ರೆಡ್ ಅಲರ್ಟ್ ಘೋಷಣೆ

Vishwanath S

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ತೀವ್ರತೆ ಪಡೆದಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ರೆಡ್‍ ಅಲರ್ಟ್ ಘೋಷಿಸಲಾಗಿದೆ. 

ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯನ್ನುಂಟಾಗಿದೆ. ಬಂಗಾಳ ಕೊಲ್ಲಿಯಲ್ಲಿಯಲ್ಲಿನ ವಾಯಭಾರ ಕುಸಿದಿಂದಾಗಿ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಸಂಭವಿಸಿರುವ ಭೂಕುಸಿತದಿಂದ ಮರಳು ತೆಗೆದುಹಾಕುವ ಕಾರ್ಯಾಚರಣೆಯನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಆರಂಭಿಸಿದೆ. ಕಾವೇರಿ ನದಿಯ ಮೂಲವಾದ ತಲಕಾವೇರಿ ಬಳಿಯ ಬ್ರಹ್ಮಗಿರಿಯಲ್ಲಿ ಭೂಕುಸಿತ ಸಂಭವಿಸಿದೆ. 

ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಭಾರಿ ಮಳೆಯಿಂದ ಬ್ರಹ್ಮಗಿರಿ ಬೆಟ್ಟಗಳಲ್ಲಿ ಭಾರಿ ಭೂಕುಸಿತ ಸಂಭವಿಸಿ, ತಲಕಾವೇರಿ ಅರ್ಚಕ, ಅವರ ಪತ್ನಿ, ಸಹೋದರ ಮತ್ತು ಇಬ್ಬರು ಸಹಾಯಕ ಅರ್ಚಕರು ಸೇರಿದಂತೆ ಐದು ಜನರು ನಾಪತ್ತೆಯಾಗಿದ್ದಾರೆ. ಇವರೆಲ್ಲರನ್ನು ಪತ್ತೆ ಮಾಡಲು ಕಾರ್ಯಾಚರಣೆ ಮುಂದುವರೆದಿದೆ.

ಭಾರೀ ಮಳೆ ಪೀಡಿತ ಜಿಲ್ಲೆಗಳ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂತ್ರಸ್ತ ಕುಟುಂಬಗಳಿಗೆ 10,000 ರೂ. ಮಧ್ಯಂತರ ಪರಿಹಾರ ಮತ್ತು ನೈಸರ್ಗಿಕ ವಿಕೋಪದಿಂದ ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾದವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿರುವ ಸಮಯದಲ್ಲೇ ಮುಖ್ಯಮಂತ್ರಿ ಈ ನಿರ್ಧಾರ ಪ್ರಕಟಿಸಿದ್ದಾರೆ. ನೈರುತ್ಯ ಮುಂಗಾರು ಮುಂದುವರೆಯುತ್ತಿದ್ದಂತೆ, ಭಾರೀ ಗಾಳಿಯೊಂದಿಗೆ ಭಾರಿ ಮತ್ತು ವ್ಯಾಪಕ ಮಳೆಯು ರಾಜ್ಯದಾದ್ಯಂತ 12 ಜಿಲ್ಲೆಗಳನ್ನು ಸಂಕಷ್ಟಕ್ಕೀಡುಮಾಡಿದೆ.

SCROLL FOR NEXT