ರಾಜ್ಯ

ಸತತ ಮಳೆಯಿಂದ ಅರ್ಚಕರ ಕುಟುಂಬವನ್ನು ಹುಡುಕುವ ರಕ್ಷಣಾ ಕಾರ್ಯಕ್ಕೆ ಅಡ್ಡಿ: ಸಚಿವ ವಿ.ಸೋಮಣ್ಣ

Sumana Upadhyaya

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಶುಕ್ರವಾರ ಕೂಡ ಮುಂದುವರಿದಿದ್ದು, ಭಾಗಮಂಡಲದಲ್ಲಿ ಶ್ರೀ ಭಗಂಡೇಶ್ವರ ದೇವಾಲಯದ ಆವರಣಕ್ಕೆ ಕಾವೇರಿ ನದಿ ನೀರು ನುಗ್ಗಿದೆ.

ತಾವರೆಕೆರೆ- ಮಡಿಕೇರಿಯಿಂದ ಕುಶಾಲನಗರ ರಸ್ತೆಯ ಮೇಲೆ ನೀರು ನಿಂತಿರುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಪರಿಣಾಮ ಕುಶಾಲನಗರಕ್ಕೆ ಗುಡ್ಡೆಹೊಸೂರು - ಹಾರಂಗಿ ಮಾಗ೯ವಾಗಿ ವಾಹನ ಸಂಚರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ಕುಶಾಲನಗರದಲ್ಲಿ ತಗ್ಗು ಪ್ರದೇಶದ ಹಲವು ಬಡಾವಣೆಗಳಿಗೆ ಕಾವೇರಿ ನದಿ ನೀರು ನುಗ್ಗಿದ್ದು, ಅಪಾಯದಂಚಿನಲ್ಲಿರುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಭಾಗಮಂಡಲದಲ್ಲಿ ಕುಟುಂಬವೊಂದು ಅಪಾಯದಲ್ಲಿದ್ದು, ರಕ್ಷಣೆಗೆ ಗ್ರಾಮಸ್ಥರು ಮುಂದಾಗಿದ್ದಾರೆ.

ಸಚಿವ ವಿ ಸೋಮಣ್ಣ ಭೇಟಿ: ತಲಕಾವೇರಿಯಲ್ಲಿ ಪರಿಸ್ಥಿತಿ ಕ್ಲಿಷ್ಟವಾಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ, ದೇವಸ್ಥಾನದ ಅರ್ಚಕರು ಕಣ್ಮರೆಯಾದ ಮನೆಯ ಸ್ಥಳವು ಸಂಪೂರ್ಣವಾಗಿ ಕೆಸರಿನಿಂದ ತುಂಬಿಹೋಗಿದೆ. ಭಾರೀ ಮಳೆ, ಮಂಜಿನ ಕಾರಣದಿಂದ ರಕ್ಷಣಾ ಕಾರ್ಯ ಸ್ಥಗಿತವಾಗಿದೆ. ಭಾಗಮಂಡಲದಲ್ಲಿ ಕಾವೇರಿ ಪ್ರವಾಹದಿಂದಾಗಿ ಜೆಸಿಬಿ ಸೇರಿದಂತೆ ವಾಹನಗಳು ಅತ್ತ ಕಡೆ ಸಾಗಲಾರದೆ ರಕ್ಷಣಾ ಕಾರ್ಯ ನಡೆಸಲಾಗದ ಸ್ಥಿತಿ ಎದುರಾಗಿದೆ ಎಂದು ಸಚಿವ ಸೋಮಣ್ಣ ಮಾಧ್ಯಮಗಳಿಗೆ ತಿಳಿಸಿದರು.

ಅವರು ಇಂದು ಭೂಕುಸಿತ, ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ತಿಳಿದುಕೊಂಡರು. ಅವರ ಜೊತೆ ಸಂಸದ ಪ್ರತಾಪ ಸಿಂಹ, ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡ ಇದ್ದರು. 

SCROLL FOR NEXT