ರಾಜ್ಯ

ಹಾಸನ ರೈತ ಬಸವೇಗೌಡರ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ

Shilpa D

ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವಿಡಿಯೋ ಸಂವಾದದಲ್ಲಿ  ಹಾಸನ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘವೊಂದರ ಕಾರ್ಯದರ್ಶಿಯಾಗಿರುವ ಬಸವೇಗೌಡ ಮಾತನಾಡಿದರು.

ಪಿಎಂ ಕಿಸಾನ್ ಯೋಜನೆಗೆ 17 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಪ್ರಧಾನಿ ಬಿಡುಗಡೆ ಮಾಡಿದರು. ಅದಾದ ಬಳಿಕ ಕರ್ನಾಟಕ ರೈತರ ತಂಡವೊಂದರೊಂದಿಗೆ ಪ್ರಧಾನಿಗಳು ವಿಡಿಯೋ ಸಂವಾದ ನಡೆಸಿದರು. 

ಸಂಘದಿಂದ ರೈತರಿಗೆ ಯಾವ್ಯಾವ ನೆರವು ನೀಡಲಾಗುತ್ತಿದೆ, ಎಷ್ಟು ರೈತರಿಗೆ ನೆರವು ಸಿಗುತ್ತಿದೆ, ಹಣಕಾಸು ನೆರವಿನ ವ್ಯವಸ್ಥೆ ಹೇಗಿದೆ ಎಂದು ಪ್ರಧಾನಿ ಮೋದಿ ಅವರು ಸಂಘದ ಸದಸ್ಯರನ್ನು ವಿಚಾರಿಸಿದರು.

44 ವರ್ಷದಿಂದ ಅಸ್ತಿತ್ವದಲ್ಲಿರುವ ತಮ್ಮ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ವಹಿವಾಟು 50 ಕೋಟಿ ರೂ ಇದೆ. 22 ಗ್ರಾಮಗಳ 2,300 ರೈತರಿಗೆ ನೆರವಾಗುತ್ತಿದ್ದೇವೆ. ಇಲ್ಲಿ ಮೆಕ್ಕೆ ಜೋಳ, ಶುಂಟಿ, ಆಲೂಗಡ್ಡೆ, ಅಡಿಕೆ ಮೊದಲಾದ ಬೆಳೆಗಳನ್ನ ಬೆಳೆಯಲಾಗತ್ತಿದೆ ಎಂದು ಬಸವೇಗೌಡ ಮಾಹಿತಿ ನೀಡಿದರು. ಸಂಘ ಪ್ರಾರಂಭಿಸಲು ಕಾರಣವೇನೆಂಬ ಪ್ರಶ್ನೆಗೆ ಉತ್ತರಿಸಿದ ಬಸವೇಗೌಡ, 40 ವರ್ಷದ ಹಿಂದೆ ರೈತರಿಗೆ ಸರಿಯಾಗಿ ಸಾಲ ಸಿಗುತ್ತಿರಲಿಲ್ಲ. ರೈತರಿಗೆ ಬಿತ್ತನೆ ಬೀಜ,ರಸಗೊಬ್ಬರ, ಕೀಟನಾಶಕ ಸರಿಯಾಗಿ ಸಿಗಗುತ್ತಿರಲಿಲ್ಲ,
ಹಾಗಾಗಿ, ತಾವು ಸಂಘ  ಸ್ಥಾಪಿಸಿಕೊಂಡು ರೈತರಿಗೆ ಸಾಲದ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತಿದ್ದೇವೆಂದು ತಿಳಿಸಿದರು.

ಕ್ಯಾತನಹಳ್ಳಿ ಗ್ರಾಮದಲ್ಲಿ 1,200 ಮೆಟ್ರಿಕ್ ಟನ್ ದಾಸ್ತಾನು ಮಾಡುವ ಗೋದಾಮನ್ನು ಸ್ಥಾಪಿಸುವ ಯೋಜನೆ ಹೊಂದಿದ್ದೇವೆ. ಕಟಾವು ಸಂದರ್ಭದಲ್ಲಿ ರೈತರ ಬೆಳೆಗಳಿಗೆ ಕೆಲವೊಮ್ಮೆ ಸೂಕ್ತ ಬೆಲೆ ಸಿಗುವುದಿಲ್ಲ. ನಾವು ಅವರ ಬೆಳೆಯನ್ನು ದಾಸ್ತಾನು ಮಾಡಿಕೊಂಡು ಅದರ ಮೇಲೆ ರೈತರಿಗೆ ಸಾಲ ಕೂಡ ಕೊಡುತ್ತೇವೆ. ಸೂಕ್ತ ಬೆಲೆ ಸಿಕ್ಕರೆ ರೈತರು ಆ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಈ ಗೋದಾಮು ಸ್ಥಾಪನೆಗೆ 40 ಲಕ್ಷ ರೂ ವೆಚ್ಚವಾಗುವ ನಿರೀಕ್ಷೆ ಇದೆ. ನಬಾರ್ಡ್​ನಿಂದ 30 ಲಕ್ಷ ರೂ ಸಾಲ ಪಡೆಯಲಿದ್ದೇವೆ. 3 ತಿಂಗಳಲ್ಲಿ
ಈ ಯೋಜನೆ ಪೂರ್ಣಗೊಳ್ಳುತ್ತದೆ. ಇದರಿಂದ 2-3 ಸಾವಿರ ರೈತರಿಗೆ ಲಾಭವಾಗುತ್ತದೆ ಎಂದು ಬಸವೇಗೌಡರು ಪ್ರಧಾನಿ ಮೋದಿ ಅವರಲ್ಲಿ ವಿವರ ಬಿಚ್ಚಿಟ್ಟರು.ನಂತರ ಪ್ರಧಾನಿ ಮೋದಿ ಅವರು ಹಾಸನದ ಈ ರೈತರಿಗೆ ಶುಭ ಹಾರೈಸಿದರು.

SCROLL FOR NEXT