ರಾಜ್ಯ

ರೂ.4000 ಕೋಟಿ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಮನವಿ

Manjula VN

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸಲು ರೂ.4 ಸಾವಿರ ಕೋಟಿ ವಿಶೇಷ ಆರ್ಥಿಕ ನೆರವು ಮತ್ತು ಎಸ್'ಡಿಆರ್'ಎಫ್'ನ (ರಾಜ್ಯ ವಿಕೋಪ ಪರಿಹಾರ ನಿಧಿ) ಎರಡನೇ ಕಂತು ರೂ.395 ಕೋಟಿಗಳನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದ್ದು, ಇದಕ್ಕೆ ಪ್ರಧಾನಿ ಮೋದಿಯವರಿದೆ ಸೂಕ್ತ ಆಶ್ವಾಸನೆ ಬಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಕರ್ನಾಟಕ ಸೇರಿದಂತೆ ಪ್ರವಾಹ ಪೀಡಿತ ರಾಜ್ಯಗಳ ಜೊತೆಗೆ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯ ಸಂವಾತ ನಡೆಸಿ ಮಾತುಕತೆ ನಡೆಸಿದರು. 

ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ ರಾಜ್ಯದಲ್ಲಿ ಆಗಿರುವ ಹಾನಿಯ ಬಗ್ಗೆ ವಿವರ ನೀಡಿದರು. 

ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿದ ತೀವ್ರ ಮಳೆಯಿಂದಾಗಿ ಪ್ರಾಥಮಿಕ ಅಂದಾಜಿನ ಪ್ರಕಾರ ರೂ.4 ಸಾವಿರ ಕೋಟಿ ಮೌಲ್ಯದ ಆಸ್ತಿಪಾಸ್ತಿ, ಬೆಳೆ, ರಸ್ತೆ, ಸೇತುವೆಗಳು ಹಾಳಾಗಿವೆ. 56 ತಾಲೂಕುಗಳ 885 ಗ್ರಾಮಗಳು ಹಾನಿಗೊಳಗಾಗಿವೆ. ಪ್ರಾಥಮಿಕ ವರದಿಗಳ ಪ್ರಕಾರ 3 ಸಾವಿ ಮನೆಗಳು, 80 ಸಾವಿರ ಹೆಕ್ಟೇರ್ ಪ್ರದೇಶದ ಕೃಷಿ, ತೋಟಗಾರಿಕೆ ಬೆಳೆಗಳು ನಾಶವಾಗಿವೆ. 

3500 ಕಿಮೀ ರಸ್ತೆ, 394 ಕಟ್ಟಡಗಳು, 550 ಸೇತುವೆಗಳು, 104 ಸಣ್ಣ ನೀರಾವರಿ ಕೆರೆಗೆಳು, ವಿದ್ಯುತ್ ಪರಿವರ್ತಕಗಳು ಸೇರಿದಂತೆ ಮೂಲಸೌಕರ್ಯಗಳಿಗೆ ಹಾನಿಯುಂಟಾಗಿದೆ. 1744 ಪುನರ್ ವಸತಿ ಕೇಂದ್ರಗಳನ್ನು ಗುರುತಿಸಲಾಗಿದೆ. ಅಲ್ಲದೇ, ಪ್ರವಾಹದಲ್ಲಿ ಮೃತಪಟ್ಟ ಕುಟುಂಗಳಿಗೆ ರೂ.5 ಲಕ್ಷ ಪರಿಹಾರ ನೀಡಲಾಗುತ್ತದೆ. ಸಂಪೂರ್ಣವಾಗಿ ಸಮೀಕ್ಷೆ ನಡೆಸಿದ ಬಳಿಕ ನಷ್ಟದ ಮೊತ್ತ ತಿಳಿದು ಬರಲಿದೆ ಎಂದು ಬೊಮ್ಮಾಯಿಯವರು ಪ್ರಧಾನಮಂತ್ರಿಗಳಿಗೆ ವಿವರ ನೀಡಿದರು. 

ರಾಜ್ಯದ ಸಮಸ್ಯೆ ಮತ್ತು ಬೇಡಿಕೆಗಳನ್ನು ಆಲಿಸಿದ ಮೋದಿಯವರು ಪರಿಹಾರ ಕ್ರಮ ಕೈಗೊಳ್ಳುವ ಬಗ್ಗೆ ಆಶಾವಾಸನೆ ನೀಡಿದರು ಎಂದು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಚಿವ ಬೊಮ್ಮಾಯಿ ತಿಳಿಸಿದರು. 

SCROLL FOR NEXT