ರಾಜ್ಯ

ಹಿಂಸಾಚಾರ ಪೂರ್ವಯೋಜಿತ ಕೃತ್ಯ, ಎಸ್'ಡಿಪಿಐ ಕೈವಾಡವಿದೆ: ಸಚಿವ ಸಿಟಿ ರವಿ

Manjula VN

ಬೆಂಗಳೂರು: ನಗರದ ಕಾವಲ್ ಬೈರಸಂದ್ರದಲ್ಲಿ ಹಾಗೂ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಪೂರ್ವಯೋಜಿತ ಕೃತ್ಯವಾಗಿದ್ದು, ಹಿಂಸಾಚಾರದ ಹಿಂದೆ ಎಸ್'ಡಿಪಿಐ ಕೈವಾಡವಿದೆ ಎಂದು ಸಚಿವ ಸಿ.ಟಿ.ರವಿಯವರು ಬುಧವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದೊಂದು ಪೂರ್ವಯೋಜಿತ ಕೃತ್ಯವೆಂದೆನಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಗೊಳ್ಳುತ್ತಿದ್ದಂತೆಯೇ ಸಾವಿರಾರು ಜನರು ಸೇರಿಕೊಂಡಿದ್ದು, 200-300 ಹಾಗೂ ಶಾಸಕರ ಮನೆಯನ್ನು ಧ್ವಂಸಗೊಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಎಂದು ಹೇಳಿದ್ದಾರೆ. 

ತನ್ನ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಹಿಂಸಾಚಾರದಲ್ಲಿ ತೊಡಗಿಕೊಂಡಿರುವ ಜನರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಿದೆ. ಇದು ಮೊದಲ ಪ್ರಕರಣವೇನಲ್ಲ. ಸಿಎಎ ಪ್ರತಿಭಟನೆ ವೇಳೆಯೂ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿತ್ತು. ಇದೊಂದು ಪೂರ್ವನಿಯೋಜಿತ ಘಟನೆಯಾಗಿದ್ದು, ಪ್ರತ್ಯೇಕವಾಗಿ ನಡೆದಿರುವ ಘಟನೆಯಲ್ಲ. ಹಿಂಸಾಚಾರದ ಹಿಂದೆ ಎಸ್‌ಡಿಪಿಐ ಕೈವಾಡವಿದೆ. ಜನರನ್ನು ಪ್ರಚೋದಿಸಿ, ಗಲಭೆ ಸೃಷ್ಟಿಸಲು ಎಸ್‌ಡಿಪಿಐ ಹೆಸರುವಾಸಿಯಾಗಿದೆ ಎಂದು ಕಿಡಿಕಾರಿದ್ದಾರೆ. 

ಇಸ್ಲಾಂ ಧರ್ಮಗುರು ಮಹಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳಕಾರಿ ಪೋಸ್ಟ್ ಮಾಡಲಾಗಿದೆ ಎಂದು ನಿನ್ನೆ ರಾತ್ರಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.

ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸ, ಸುತ್ತಮುತ್ತಲಿನ ಮನೆಗಳು ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಕೋಮಿಗೆ ಸೇರಿದ ಉದ್ರಿಕ್ತ ಗುಂಪು ದಾಂಧಲೆ ನಡೆಸಿ, ಸಿಕ್ಕಸಿಕ್ಕ ವಾಹನಗಳು, ಮನೆ-ಮಳಿಗೆಗಳಿಗೆ ಬೆಂಕಿ ಹಚ್ಚಿದ್ದರು. ಶಾಸಕರ ನಿವಾಹ ಹಾಗೂ ಪಕ್ಕದ ಮನೆ ಭಸ್ಮವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಈ ವೇಳೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನೆ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತರ ಗುಂಪು ಮಾರಾಕಾಸ್ತ್ರಗಳನ್ನು ಹಿಡಿದು ಹಿಂಸಾಚಾರ ನಡೆಸಿದ್ದರು, ಅಲ್ಲದೆ, ಪಟಾಕಿಗಳನ್ನು ಸಿಡಿಸಿ ವಿಕೃತಿ ಮೆರೆದಿದ್ದರು. 

SCROLL FOR NEXT