ರಾಜ್ಯ

ಬೆಂಗಳೂರು: ಗಲಭೆ ಅಂತ್ಯಗೊಂಡರೂ ನಿಲ್ಲದ ರಾಜಕೀಯ ಕೆಸರೆರಚಾಟ!

Manjula VN

ಬೆಂಗಳೂರು: ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಭೆ ಪೂರ್ಣ ಪ್ರಮಾಣದಲ್ಲಿ ಅಂತ್ಯಗೊಂಡಿದ್ದರೂ, ರಾಜಕೀಯ ನಾಯಕರ ಆರೋಪ- ಪ್ರತ್ಯಾರೋಪಗಳ ಕೆಸರೆರಚಾಟ ಮುಂದುವರೆದಿದೆ. 

ತನ್ನ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಹಿಂಸಾಚಾರದಲ್ಲಿ ತೊಡಗಿಕೊಂಡಿರುವ ಜನರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಿದೆ. ಇದು ಮೊದಲ ಪ್ರಕರಣವೇನಲ್ಲ. ಸಿಎಎ ಪ್ರತಿಭಟನೆ ವೇಳೆಯೂ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿತ್ತು. ಇದೊಂದು ಪೂರ್ವನಿಯೋಜಿತ ಘಟನೆಯಾಗಿದ್ದು, ಪ್ರತ್ಯೇಕವಾಗಿ ನಡೆದಿರುವ ಘಟನೆಯಲ್ಲ. ಹಿಂಸಾಚಾರದ ಹಿಂದೆ ಎಸ್‌ಡಿಪಿಐ ಕೈವಾಡವಿದೆ. ಜನರನ್ನು ಪ್ರಚೋದಿಸಿ, ಗಲಭೆ ಸೃಷ್ಟಿಸಲು ಎಸ್‌ಡಿಪಿಐ ಹೆಸರುವಾಸಿಯಾಗಿದೆ ಒಂದೆಡೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದೆ. 

ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಬಿಜೆಪಿಯವರು ಗಲಭೆ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚಿ ಲಾಭ ಮಾಡಿಕೊಳ್ಳಲು ಹೊರಡಿದ್ದಾರೆ. ಮುಖ್ಯಮಂತ್ರಿ ಒಬ್ಬರು ಬಿಟ್ಟರೆ ಉಳಿದ ಸಚಿವರು, ಮುಖಂಡರು ಉರಿಯುತ್ತಿರುವ ಬೆಂಕಿಗೆ ತುಪ್ಪ, ಸೀಮೆಎಣ್ಣೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿದ್ದಾರೆ. ಇಡೀ ಘಟನೆಯ ಹಿಂದೆ ಬಿಜೆಪಿಯವರ ರಾಜಕೀಯ ಪಿತೂರಿಯಿದೆ ಎಂದು ಹೇಳುತ್ತಿದ್ದಾರೆ. 

ಬಿಜೆಪಿ ರಾಷ್ಟ್ರೀಯ  ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮಾತನಾಡಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. 

ತನ್ನ ಪಕ್ಷದ ಶಾಸಕರಾದ ಅಖಂಡ ಶ್ರೀನಿವಾಸ ಮೂರ್ತಿ ಮನೆಯ ಮೇಲೆ ದಾಂಧನೆ ನಡೆದಿದ್ದರೂ ಅದನ್ನೂ ಕೂಡಲೇ ಖಂಡಿಸುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಘಟನೆ ನಡೆದ 14 ಗಂಟೆಗಳ ನಂತರ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಂಡು ಗಲಭೆಗೆ ನವೀನ್ ರ ಫೇಸ್ ಬುಕ್ ಪೋಸ್ಟ್ ಮತ್ತು ಕ್ರಮಕೈಗೊಳ್ಳಲು ಪೊಲೀಸರು ವಿಳಂಬ ಮಾಡಿದ್ದೇ ಕಾರಣ ಎಂದು ದೂರಿದೆ. ಕಾಂಗ್ರೆಸ್ ಪಕ್ಷ ಇಂತಹ ದೊಂಬಿಯನ್ನು ಬೆಂಬಲಿಸುತ್ತದೆಯೇ? ಅಲ್ಪಸಂಖ್ಯಾತ ಗುಂಪುಗಳಿಂದಾಗುವ ಹಿಂಸಾಚಾರ ಖಂಡಿಸಲು ಕಾಂಗ್ರೆಸ್ ಏಕೆ ಹಂಜಿಯುತ್ತಿದೆ ಎಂದು ಪ್ರಶ್ನಿಸಿದ್ದಾರೆ. 

ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ದಾಳಿ ಹಿಂದೆ ಪಿಎಫ್ಐ-ಎಸ್'ಡಿಪಿಐ ಪಿತೂರಿ ಇದೆ. ಹಿಂದೂಗಳ ಮನೆಗಳನ್ನು ಗುರಿ ಮಾಡಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಪಡಿಸಿದ್ದಾರೆಂದು ಹೇಳಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಗಾರಿದ್ದಾರೆ. 

ಈ ನಡುವೆ ಉಪ ಮುಖ್ಯಮಮಂತ್ರಿ ಅಶ್ವತ್ಥ್ ನಾರಾಣ್ ಅವರು ಕೂಡ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದು, ಯಾವುದೇ ಧರ್ಮ ಅಥವಾ ಯಾವುದೇ ಧಾರ್ಮಿಕ ವ್ಯಕ್ತಿಗಳ ವಿರುದ್ಧ ಕೋಮು ಗಲಭೆಯಂತಹ ವಿಚಾರಗಳ ಬಗ್ಗೆ ಪೋಸ್ಟ್ ಹಾಕುವುದು ಸರಿಯಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹಿಂಸಾಚಾರವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಸಿದ್ದರಾಮಯ್ಯ ಅವರು ಮಾತನಾಡಿ, ಕಾವಲ್ ಬೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆ ಎರಡೂ ಖಂಡನೀಯ. ಹಿಂದೂ-ಮುಸ್ಲಿಂ ಎರಡು ಸಮುದಾಯದವರು ಸಂಯಮದಿಂದ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತೇನೆಂದು ಹೇಳಿದ್ದರು.

SCROLL FOR NEXT