ರಾಜ್ಯ

ನಾವೇನು ತಪ್ಪು ಮಾಡಿದ್ದೇವೆಂದು ಈ ಶಿಕ್ಷೆ?: ಕನಸಿನ ಮನೆ ಸುಟ್ಟು ಕರಕಲಾಗಿರುವುದು ಕಂಡು ಶಾಸಕನ ಪತ್ನಿ ಕಣ್ಣೀರು

Manjula VN

ಬೆಂಗಳೂರು: ನಾವೇನು ತಪ್ಪು ಮಾಡಿದ್ದೇವೆಂದು ನಮಗೆ ಈ ಶಿಕ್ಷೆ?... ಇದೀಗ ನಾವು ಎಲ್ಲಿರಬೇಕು?... ಎಂದು ಪ್ರಶ್ನಿಸಿರುವ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರಕ ಪತ್ನಿ 40 ವರ್ಷಗಳಿಂದ ನೆಲೆಸಿದ್ದ ಕನಸಿನ ಮನೆ ಸುಟ್ಟು ಕರಕಲಾಗಿರುವುದನ್ನು ಕಂಡು ಕಣ್ಣೀರು ಹಾಕಿದ್ದಾರೆ. 

ಮನೆಯ ಸ್ಥಿತಿ ನೋಡುತ್ತಿದ್ದಂತೆಯೇ ಪತ್ನಿಯ ಜೊತೆಗೆ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಪುತ್ರಿ ಪ್ರಿಯಾಂಕ ಅವರು ಬಿಕ್ಕಿ ಬಿಕ್ಕಿ ಅತ್ತರು. ಅಲ್ಲದೆ, ದಾಂಧಲೆ ನಡೆಸಿದವರಿಗೆ ಹಿಡಿ ಶಾಪ ಹಾಕಿದರು. 

ಪುಂಡರ ಏಕಾಏಕಿ ದಾಳಿಯಿಂದ ಬೆಚ್ಚಿ ಮನೆಯಿಂದ ಹೊರಗೆ ಹೋಗಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಪತ್ನಿ ಹಾಗೂ ಪುತ್ರಿ ಪಿರ್ಯಾಂಕ, ಸಹೋದರಿ ಅಶ್ವತ್ಥಮ್ಮ ಅವರು ಎರಡು ದಿನಗಳ ಬಳಿಕ ಗುರುವಾರ ಮನೆ ವೀಕ್ಷಿಸಲು ಬಂದಾಗ ಮನೆಯ ಪರಿಸ್ಥಿತಿ ಕಂಡು ದುಃಖ ತಡೆಯಲಾಗದೆ ಕಣ್ಣೀರು ಹಾಕಿದರು. 

ಕುಟುಂಬ ಸದಸ್ಯರು ಮನೆಗೆ ಬರುವ ಮೊದಲು ಶ್ರೀನಿವಾಸ್ ಸಹೋದರ ಮುನೇಗೌಡ ಮನೆ ಪರಿಶೀಲಿಸಿ ಬಂದರು. ಬಳಿಕ ಶ್ರೀನಿವಾಸ್ ಮನೆಯಲ್ಲಿ ಅಪಾರ ಪ್ರಮಾಣದ ಹಣ, ಒಡವೆ ಲೂಟಿಯಾಗಿತ್ತು. ಮನೆಯಲ್ಲಿದ್ದ ರೂ.5 ಲಕ್ಷ ಹಣ ಹಾಗೂ ಒಡವೆಯನ್ನು ದೋಚಿದ್ದಾರೆ. ತಾಯಿತ ಮಾಂಗಲ್ಯ ಸರವನ್ನು ತಮ್ಮ ಪುತ್ರಿ ಬೂದಿಯಿಂದ ಹೆಕ್ಕಿ ತೆಗೆದಿದ್ದಾರೆಂದು ಅಖಂಡ ಶ್ರೀನಿವಾಸಮೂರ್ತಿಯವರು ತಿಳಿಸಿದರು. 

ಇಲ್ಲಿನ ಮುಸ್ಲಿಮರು ಹಾಗೂ ಹಿಂದೂಗಳು ಅಣ್ಣ ತಮ್ಮಂದಿರ ರೀತಿಯಲ್ಲಿ ಇದ್ದೆವು. ನನ್ನ ಮನೆ ಒಡೆದು ಹಾಕುವಷ್ಟು ಕೋಪವೇನಿತ್ತು? ಘಟನೆ ನಡೆದ ದಿನ ನಾವು ಮನೆಯಲ್ಲಿ ಇರಲಿಲ್ಲ. ಒಂದೇ ವೇಳೆ ನಾವು ಮನೆಯಲ್ಲಿ ಇದ್ದಿದ್ದರೆ ನಾವು ಏನಾಗುತ್ತಿದ್ದೆವು ಎಂಬುದು ಗೊತ್ತಿಲ್ಲ. ಕಿಡಿಗೇಡಿಗಳು ಪೂರ್ವ ನಿಯೋಜಿತವಾಗಿ ದುಷ್ಕೃತ್ಯ ಎಸಗಿದಂತೆ ಗೊತ್ತಾಗುತ್ತಿದೆ. ನನ್ನ ಸಹೋದರಿ ಪುತ್ರ ಪೋಸ್ಟ್ ಮಾಡಿದರೆ ಕಾನೂನು ಹೋರಾಟ ಮಾಡಬಹುದಿತ್ತು. ಏಕಾಏಕಿ ಮನೆ ಧ್ವಂಸ ಮಾಡಿ ಗದ್ದ ಎಬ್ಬಿಸುವುದು ಎಷ್ಟು ಸರಿ ಎಂದು ಶಾಸಕ ಶ್ರೀನಿವಾಸ ಮೂರ್ತಿಯವರು ಪ್ರಶ್ನಿಸಿದ್ದಾರೆ.
 
ದೃಶ್ಯಾವಳಿ ನೋಡಿದರೆ ಕಿಡಿಗೇಡಿಗಳು ನನ್ನ ಕ್ಷೇತ್ರದ ಜನರಲ್ಲ. ಯಾರೋ ಹೊರಗಿನವರು ಬಂದು ಕೃತ್ಯ ಮಾಡಿರುವುದು ಸ್ಪಷ್ಟವಾಗಿದೆ ಎಂಬ ಅನುಮಾನವನ್ನು ಇದೇ ವೇಳೆ ವ್ಯಕ್ತಪಡಿಸಿದ್ದಾರೆ. 

ಇದಕ್ಕೆ ಪೂರಕವಾಗಿ ಸಹೋದರಿ ಅಶ್ವತ್ಥಮ್ಮ, ನಮ್ಮ ಪ್ರದೇಶದಲ್ಲಿನ ಮುಸ್ಲಿಮರು ಗಲಾಟೆ ಮಾಡಿಲ್ಲ. ಹೊರಗಡೆಯಿಂದ ಬಂದವರೇ ಇದಕ್ಕೆಲ್ಲಾ ಕಾರಣ ಎಂದರು. 

SCROLL FOR NEXT