ರಾಜ್ಯ

ಕರ್ನಾಟಕದಲ್ಲಿ ವರುಣನ ಅವಾಂತರ: ಮಳೆಯಿಂದ 10 ಸಾವಿರ ಕೋಟಿ ರು. ನಷ್ಟ

Shilpa D

ಬೆಂಗಳೂರು: ರಾಜ್ಯದಲ್ಲಿ ಸುರಿದ ಮಳೆಯಿಂದ ಸುಮಾರು 10 ಸಾವಿರ ಕೋಟಿ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇತ್ತೀಚೆಗೆ ನಡೆಸಿದ ಆರಂಭಿಕ ಮೌಲ್ಯಮಾಪನದ ಅನುಸಾರ 10 ಸಾವಿರ ಕೋಟಿ ರು ನಷ್ಟವಾಗಿದ್ದು, ಕೇಂದ್ರದಿಂದ 4 ಸಾವಿರ ಕೋಟಿ ರು ಹಣಕಾಸಿನ ನೆರವನ್ನು ನಿರೀಕ್ಷಿಸಲಾಗಿದ್ದು, ಅದಕ್ಕಾಗಿ ಸಂಪೂರ್ಣ ವರದಿ ತಯಾರಿಸಲಾಗುತ್ತಿದೆ.

ಆಗಸ್ಟ್ 1 ರಿಂದ ಇಂದಿನವರೆಗೆ ರಾಜ್ಯದ 13 ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು, ಮೂರಾರು ಗ್ರಾಮಗಳು ಪ್ರವಾಹಕ್ಕೊಳಗಾಗಿವೆ. ರಾಜ್ಯ ವಿಪತ್ತು ನಿರ್ವಹಣಾ   ಪ್ರಾಧಿಕಾರದ ವಿವರಣೆಯಂತೆ 18 ಮಂದಿ ಜೀವ ಕಳೆದುಕೊಂಡಿದ್ದಾರೆ, 42 ಜಾನುವಾರುಗಳು ಅಸು ನೀಗಿವೆ,  ಜೊತೆಗೆ 125 ಮನೆಗಳು ಸಂಪೂರ್ಣವಾಗಿ ಜಖಂ ಗೊಂಡಿದ್ದು 3,639
ಮನೆಗಳು ಭಾಗಶಃ ಹಾನಿಯಾಗಿವೆ.

ಇದನ್ನು ಬಿಟ್ಟು 43,827 ಹೆಕ್ಚೇರ್ ಕೃಷಿ ಭೂಮಿ, 48,696 ಹೆಕ್ಟೇರ್ ತೋಟಗಾರಿಕಾ ಭೂಮಿ 10 ದಿನಗಳಲ್ಲಿ ನಾಶವಾಗಿವೆ.ವಿವಿಧ ಜಿಲ್ಲೆಗಳಲ್ಲಿರುವ 109  ಪರಿಹಾರ ಶಿಬಿರಗಳಲ್ಲಿ ಸುಮಾರು 3,500 ಮಂದಿ ಜನ ಆಶ್ರಯ ಪಡೆದಿದ್ದಾರೆ,50 ರಿಂದ 100 ರಸ್ತೆ ಮತ್ತು ಸೇತುವೆ ಹಾನಿಗೊಳಗಾಗಿವೆ.

ರಸ್ತೆಗಳು, ಸೇತುವೆಗಳು ಮತ್ತು ಕಲ್ವರ್ಟ್‌ಗಳ ನಷ್ಟದ ಅಂದಾಜು ಒದಗಿಸಲು ನಾವು ಎಂಜಿನಿಯರ್‌ಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಇತ್ತೀಚಿನ ಮಾಹಿತಿಯ ಪ್ರಕಾರ, 16,633 ಕಿ.ಮೀ ರಸ್ತೆಗಳು ಹಾನಿಗೀಡಾಗಿವೆ, ಕೆಲವು ಭಾಗಶಃ ಮತ್ತು ಕೆಲವು ಸಂಪೂರ್ಣವಾಗಿ ಹಾಳಾಗಿವೆ, ಇದರಲ್ಲಿ ರಾಜ್ಯ ಮತ್ತು ರಾಷ್ಚ್ರೀಯ ಹೆದ್ದಾರಿಗಳು ಕೂಡ ಸೇರಿವೆ ಎಂದು ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಡಗು ಮತ್ತು ಬೆಳಗಾವಿಗಳಲ್ಲಿ 547 ಸೇತುವೆ ಮತ್ತು ತೂಬುಗಳು ಕೂಡ ಹಾನಿಗೊಳಗಾಗಿವೆ, ಮಳೆ ಮತ್ತು ರಸ್ತೆಗಳು ಮತ್ತು ಸೇತುವೆಗಳಲ್ಲಿ ನೀರು ಸಂಗ್ರಹವಾದಾಗ  ಹಾನಿಯನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್ ತಿಳಿಸಿದ್ದಾರೆ.

SCROLL FOR NEXT