ರಾಜ್ಯ

ರಾಜ್ಯದ ನಾಲ್ಕು ಕಡೆಗಳಲ್ಲಿ ವಕ್ಫ್ ಬೋರ್ಡ್‌ನಿಂದ ಕೊರೊನಾ ಆಸ್ಪತ್ರೆ; 50 ಲಕ್ಷ ರೂ. ನೆರವು ಘೋಷಿಸಿದ ಎನ್.ಎ. ಹ್ಯಾರೀಸ್‌

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯದ ನಾಲ್ಕು ಕಡೆಗಳಲ್ಲಿ ವಕ್ಫ್ ಬೋರ್ಡ್‌ ಕೊರೋನಾ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಶತ ಪ್ರಯತ್ನ ನಡೆಸುತ್ತಿರುವ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಿರುವ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‌, ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಾಲ್ಕು ಕೊರೊನಾ ಆಸ್ಪತ್ರೆಗಳನ್ನು ತೆರೆಯಲು ನಿರ್ಧರಿಸಿದೆ.

ಸಮಾಜದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬಡವರಿಗೆ ಸರಿಯಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಹಾಗೂ ಚಿಕಿತ್ಸೆ ಸಿಗುತ್ತಿಲ್ಲ. ಆದ್ದರಿಂದ ಇಂತಹ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡಲು ವಕ್ಫ್ ಬೋರ್ಡ್‌ ಅಧೀನದಲ್ಲಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ತಲಾ ಒಂದರಂತೆ ನಾಲ್ಕು ಕೊರೊನಾ ಆಸ್ಪತ್ರೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ವಕ್ಫ್ ಬೋರ್ಡ್ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಡಾ.ಅನ್ವರ್ ಬಾಷ ತಿಳಿಸಿದ್ದಾರೆ.

ಇದೇ 19ರಂದು ಮಂಡಳಿಯ ಸಭೆ ನಡೆಯಲಿದ್ದು, ಅಲ್ಲಿ ಚರ್ಚೆ ನಡೆಸಿ ಅದರ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಅದಕ್ಕೆ ಬೇಕಾದ ಹಣಕಾಸು ನೆರವನ್ನು ಸಮುದಾಯದ ಶ್ರೀಮಂತ ವ್ಯಕ್ತಿಗಳಿಂದ ಸ್ವೀಕರಿಸಲಾಗುವುದು ಎಂದರು.

50 ಲಕ್ಷ ರೂ.ನೆರವು ಘೋಷಿಸಿದ ಎನ್.ಎ.ಹ್ಯಾರೀಸ್‌
ಇನ್ನು ವಕ್ಫ್ ಬೋರ್ಡ್‌ ನಿರ್ಧಾರಕ್ಕೆ ಶಾಸಕ ಎನ್ ಎ ಹ್ಯಾರಿಸ್ ಬೆಂಬಲ ಸೂಚಿಸಿದ್ದು, ಈ ಸಂಬಂಧ ವಕ್ಫ್ ಬೋರ್ಡ್‌ ಗೆ 50 ಲಕ್ಷ ನೆರವನ್ನೂ ಕೂಡ ಘೋಷಣೆ ಮಾಡಿದ್ದಾರೆ ಎಂದು ಯುಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

SCROLL FOR NEXT