ರಾಜ್ಯ

ಕೊಡೇರಿ ಬಳಿ ದೋಣಿ ದುರಂತ: 4 ಮಂದಿ ಮೀನುಗಾರರು ಬಲಿ

Manjula VN

ಉಡುಪಿ: ಕುಂದಾಪುರ ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಬಂದರಿನ ಬಳಿ ಭಾನುವಾರ ದೋಣಿಯೊಂದು ಮುಳುಗಿ ನಾಲ್ಕು ಮಂದಿ ಮೀನುಗಾರರು ಮೃತಪಟ್ಟಿರುವ ಘಟನೆ ನಡೆದಿದೆ. 

ಮೃತರನ್ನು ಮಂಜುನಾಥ್, ಶೇಖರ್, ನಾಗರಾಜ್ ಖರ್ವಿ ಮತ್ತು ಲಕ್ಷ್ಮಣ್ ಖರ್ವಿ ಎಂದು ಗುರ್ತಿಸಲಾಗಿದೆ.

ಭಾನುವಾರ ಬೆಳಿಗ್ಗೆ 2 ದೋಣಿಗಳಲ್ಲಿ ಒಟ್ಟು 12 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಆಗ ಸಮುದ್ರ ಶಾಂತವಾಗಿತ್ತು. ಎರಡೂ ದೋಣಿಗಳು ಜೊತೆಯಾಗಿ ಮೀನು ಹಿಡಿದು ಮಧ್ಯಾಹ್ನ ದಡದತ್ತ ವಾಪಸ್ ಬರುವಾಗ ಸಮುದ್ರ ಪ್ರಕ್ಷುಬ್ಧವಾಗಿದ್ದು, ಭಾರಿ ಗಾತ್ರದ ಅಲೆಗಳು ಏಳುತ್ತಿದ್ದವು. ದಡದಿಂದ ಕೆಲವೇ ಮೀಟರ್ ದೂರದಲ್ಲಿ ಸಾಗರಶ್ರೀ ಎಂಬ ದೋಣಿ ಅಲೆಗಳ ಅಬ್ಬರಕ್ಕೆ ನಿಯಂತ್ರಣ ತಪ್ಪಿ ನೀರಲ್ಲಿ ಮಗುಚಿತು. ಪರಿಣಾಮ ದೋಣಿಯಲ್ಲಿದ್ದ ಎಲ್ಲರೂ ನೀರಲ್ಲಿ ಮುಳುಗಿದ್ದರು. ಕೂಡಲೇ ಮತ್ತೊಂದು ದೋಣಿಯಲ್ಲಿದ್ದವರು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಆದರೆ, 4 ಮಂದಿ ನೀರಿನಲ್ಲಿ ಮುಳುಗಿದ್ದಾರೆ. 

ಮೀನುಗಾರರು ಸಹಜವಾಗಿಯೇ ಈಜುವುದರಲ್ಲಿ ನಿಪುಣರು. ಆದರೆ, ಭಾನುವಾರ ಸಮುದ್ರದಲ್ಲಿ ಗಾಳಿಯ ಅಬ್ಬರಕ್ಕೆ ಭಾರೀ ಅಲೆಗಳು ಉಂಟಾಗುತ್ತಿದ್ದು, ಮೀನುಗಾರರಿಗೆ ಈಜುವುದಕ್ಕೆ ಸಾಧ್ಯವಾಗದೆ ನೀರನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 

ಸುದ್ದಿ ತಿಳಿಯುತ್ತಿದ್ದಂತೆಯೇ ಕರಾವಳಿ ರಕ್ಷಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ನೀರಲ್ಲಿ ಮುಳುಗಿರುವ ನಾಲ್ವರು ಮೀನುಗಾರರ ಶವಗಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಸಮುದ್ರ ತೀರಾ ಉಗ್ರವಾಗಿದ್ದು, ಹುಡುಕಾಟ ಯಶ್ವಿಯಾಗಿಲ್ಲ. ರಾತ್ರಿ ಹುಡುಕುವ ಕಾರ್ಯಚರಣೆಯನ್ನು ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. 

SCROLL FOR NEXT