ರಾಜ್ಯ

ಕೋವಿಡ್-19: ಬೆಂಗಳೂರಿನಲ್ಲಿ ಇನ್ನು ಮುಂದೆ ಸೀಲ್ ಡೌನ್ ಇರಲ್ಲ: ಮಂಜುನಾಥ್ ಪ್ರಸಾದ್

Srinivasamurthy VN

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕು ಪ್ರಸರಣದ ನಡುವೆಯೇ ಬೆಂಗಳೂರಿಗರಿಗೆ ಇದ್ದ ಸೀಲ್ ಡೌನ್ ತಲೆನೋವು ಇನ್ನು ಮುಂದೆ ಇರುವುದಿಲ್ಲ.

ಹೌದು.. ನಗರದಲ್ಲಿ ನಾಳೆಯಿಂದಲೇ ಸೀಲ್​ಡೌನ್ ಪದ್ಧತಿ ರದ್ದುಪಡಿಸಲಾಗಿದ್ದು, ಸೀಲ್ ಡೌನ್ ಪದ್ಧತಿ ಕೈಬಿಡಲಾಗಿದ್ದು, ಇನ್ನು ಮುಂದೆ ಸೋಂಕಿತರ ಮನೆ ಸುತ್ತ ಬ್ಯಾರಿಕೇಡ್​ ಹಾಕುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್​.ಮಂಜುನಾಥ ಪ್ರಸಾದ್ ಹೇಳಿದ್ದಾರೆ. 

ಕೊರೊನಾ ವೈರಸ್ ಬೆಂಗಳೂರಿನಲ್ಲಿ ಗರಿಷ್ಟ ಮಟ್ಟದಲ್ಲಿದ್ದರೂ ಬಿಬಿಎಂಪಿ ಸೀಲ್‍ಡೌನ್ ಮತ್ತು ಕಂಟೈನ್ಮೆಂಟ್ ನಿಯಮಗಳಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ಬೆಂಗಳೂರಿನಲ್ಲಿ ಸೀಲ್‍ಡೌನ್ ಬೇಕಾ ಅಥವಾ ಬೇಡ್ವಾ ಎಂದು ಬಿಬಿಎಂಪಿ ಕಮೀಷನರ್ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಸಲಾಗಿದೆ. ಬಿಬಿಎಂಪಿಯ ಎಲ್ಲಾ ವಲಯದ ಎಂಜಿನಿಯರ್‌ಗಳೊಂದಿಗೆ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸೀನ್‍ಡೌನ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. 

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಎನ್​.ಮಂಜುನಾಥ ಪ್ರಸಾದ್ ಅವರು, 'ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೀಲ್ ಡೌನ್ ಇರುವುದಿಲ್ಲ.  ಕೇವಲ 100 ಮೀಟರ್​ ಒಳಗೆ 3 ಅಥವಾ 3ಕ್ಕಿಂತ ಹೆಚ್ಚು ಪ್ರಕರಣಗಳಿದ್ದರೆ ಮಾತ್ರ ಕಂಟೇನ್ಮೆಂಟ್ ಜೋನ್​​ ಮಾಡಲು ನಿರ್ಧಾರ ಮಾಡಲಾಗಿದೆ. ಇಲ್ಲದಿದ್ದರೆ ಸೀಲ್​ಡೌನ್ ಮಾಡುವುದಿಲ್ಲ. ನಾಳೆಯಿಂದ ಎಲ್ಲ ಕಡೆ ಬ್ಯಾರಿಕೇಡ್ ಹಾಕುವುದು ನಿಲ್ಲುತ್ತದೆ. ಬ್ಯಾರಿಕೇಡ್, ಕಂಟೈನ್‍ಮೆಂಟ್ ಬದಲು ಪೋಸ್ಟರ್ ಅಂಟಿಸಿ ಜನರಿಗೆ ಜವಾಬ್ದಾರಿ ಮೂಡಿಸಲಾಗುತ್ತಿದೆ. ನಾವೇ ಕೋವಿಡ್-19 ವಿರುದ್ಧ ಬ್ಯಾರಿಕೇಡ್ ಹಾಕಿ ಜನರಿಗೆ ಭಯದ ವಾತಾವರಣ ಕಲ್ಪಿಸಬಾರದು. ಜೊತೆಗೆ ಈವರೆಗೂ ನಗರದಲ್ಲಿ ಕಂಟೈನ್‍ಮೆಂಟ್‍ಗಾಗಿ ವೆಚ್ಚವಾಗಿರುವ ಮಾಹಿತಿಯೂ ಪಡೆಯಲಾಗುತ್ತದೆ ಎಂದು ಹೇಳಿದರು.

ಅಂತೆಯೇ ಜಿಯೋ ಟ್ಯಾಗ್ ಮೂಲಕವೂ ಪಾಸಿಟಿವ್ ಪ್ರಕರಣಗಳ ಜಾಡು ಪತ್ತೆ ಮಾಡಲಾಗುತ್ತದೆ. ಎಲ್ಲೆಲ್ಲಿ ಕೊರೊನಾ ಪಾಸಿಟಿವ್ ಇದೆ ಎಂದು ಅದರ ಲೊಕೇಶನ್ ಪಡೆಯಲಾಗುತ್ತದೆ ಎಂದು ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಸೀಲ್‍ಡೌನ್ ಬದಲಾವಣೆಗೆ ಕಾರಣ?
ಆರಂಭದಿಂದಲೂ ಕೊರೋನಾ ವೈರಸ್ ಸೀಲ್‍ಡೌನ್, ಕಂಟೈನ್‍ಮೆಂಟ್ ಝೋನ್ ಕಿರಿಕ್‍ಗಳಿಂದ ಜನ ರೋಸಿ ಹೋಗಿದ್ದಾರೆ. ಇದೇ ವಿಚಾರವಾಗಿ ಪಾದರಾಯನಪುರದಲ್ಲಿ ದೊಡ್ಡ ಗಲಾಟೆಯೇ ನಡೆದಿತ್ತು. ಕೊರೊನಾ ಭಯಕ್ಕಿಂತ ಹೆಚ್ಚಾಗಿ ಈಗ ರೋಗಿಗಳಿಗೆ ಸೀಲ್‍ಡೌನ್ ಮಾಡುವುದರಿಂದ ಅಕ್ಕ-ಪಕ್ಕದ ಮನೆಯವರಿಂದ ಮುಜುಗರ, ಅವಮಾನ ಎದುರಿಸುವ ಆತಂಕದಿಂದ ಬೇಸರಗೊಳ್ಳುತ್ತಿದ್ದಾರೆ.

ಅಲ್ಲದೆ ಸೀಲ್‍ಡೌನ್‍ಗಳ ಆತಂಕಕ್ಕೆ ಇತ್ತೀಚೆಗೆ ಬೆಂಗಳೂರು ಜನ ಕೊರೊನಾ ಗುಣಲಕ್ಷಣಗಳು ಕಾಣಿಸಿಕೊಂಡರೂ ಟೆಸ್ಟ್‌ಗೆ ಮುಂದೆ ಬರುತ್ತಿಲ್ಲ ಎನ್ನುವ ವರದಿ ಬಿಬಿಎಂಪಿ ಕೈ ಸೇರಿದೆ. ಬೆಂಗಳೂರಿನಲ್ಲಿ ಕಂಟೈನ್‍ಮೆಂಟ್ ಝೋನ್‍ಗಳು ಇದ್ದರೂ ಸಮರ್ಪಕವಾಗಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಸೀಲ್‍ಡೌನ್ ಆದ ಕೆಲ ಭಾಗದಲ್ಲಿ ಪೊಲೀಸ್ ಭದ್ರತೆ ನಿಯೋಜನೆ ಹಾಗೂ ಅವರಿಗೆ ಮೂಲಭೂತ ವಸ್ತುಗಳನ್ನು ಓದಗಿಸೋದು ಕೇಸ್ ಹೆಚ್ಚಾದಂತೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಸೀಲ್‍ಡೌನ್ ನೆಪದಲ್ಲಿ ಸಿಕ್ಕಾಪಟ್ಟೆ ದುಡ್ಡು ಸರ್ಕಾರಕ್ಕೆ ಖರ್ಚು ಆಗುತ್ತಿದೆ. ಸುಖಾಸುಮ್ಮನೆ ಸಾವಿರಾರು ರೂಪಾಯಿ ಲೆಕ್ಕದಲ್ಲಿ ಅಧಿಕಾರಿಗಳು ಜೇಬಿಗೆ ದುಡ್ಡು ಹೋಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಸೀಲ್ ಡೌನ್ ನೆಪದಲ್ಲಿ ಗುತ್ತಿಗೆದಾರರು ತಗಡು, ಕಬ್ಬಿಣದ ಬ್ಯಾರಿಕೇಡ್ ಗಳ ಬಾಡಿಗೆ ಹೆಸರಲ್ಲಿ ಲಕ್ಷಾಂತರ ರೂಗಳ ಬಿಲ್ ನೀಡುತ್ತಿದ್ದಾರೆ. ಅಲ್ಲದೆ ಇತ್ತೀಚಿನ ದಿನದಲ್ಲಿ ಬ್ಯಾರಿಕೇಡ್‍ಗಳ ಕೊರತೆಯೂ ಎದುರಾಗಿತ್ತು. ಇದೇ ಕಾರಣಕ್ಕೆ ಬಿಬಿಎಂಪಿ ಸೀಲ್ ಡೌನ್ ಪದ್ಧತಿಯನ್ನು ಕೈ ಬಿಟ್ಟಿದೆ ಎನ್ನಲಾಗಿದೆ.

SCROLL FOR NEXT