ರಾಜ್ಯ

ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಕೈಗಾರಿಕೆಗೆ ಸ್ಥಾಪನೆಗೆ ಪ್ರೋತ್ಸಾಹ:ಭೂಮಿ ಖರೀದಿಸಿದರೆ ಶೇ 25 ರಷ್ಟು ರಿಯಾಯಿತಿ; ಡಿಸಿಎಂ

Shilpa D

ಬೆಂಗಳೂರು: ಕೋವಿಡ್-‌19 ನಂತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ವಿನ್ಯಾಸ ಮತ್ತು ಉತ್ಪಾದನಾ (ಇಎಸ್‌ಡಿಎಂ) ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿರುವ  ರಾಜ್ಯ ಸರ್ಕಾರ, ಈ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಖರೀದಿಸಲಾಗುವ ಭೂಮಿಗೆ ಶೇ 25ರಷ್ಟು ನೇರ ಸಬ್ಸಿಡಿ ನೀಡುವುದೂ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.

ಭಾರತೀಯ ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್ ಸಂಘ (ಐಇಎಸ್‌ಎ) ಬುಧವಾರ ಹಮ್ಮಿಕೊಂಡಿದ್ದ ʼವಿಷನ್‌ ಶೃಂಗಸಭೆ- 2020 ಅನ್ನು ಉದ್ದೇಶಿಸಿ ಆನ್‌ಲೈನ್‌ನಲ್ಲಿ ಮುಖ್ಯ ಭಾಷಣ ಮಾಡಿದ ಎಲೆಕ್ಟ್ರಾನಿಕ್ಸ್, ಐಟಿ- ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ, ಇಡೀ ದೇಶದಲ್ಲಿ ಇಂಥ ಕ್ರಮ ಕೈಗೊಂಡಿರುವ ಏಕೈಕ ಹಾಗೂ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹಾಗೂ ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಟಿ ಮಾಡಲು ಇಂಥ ದಿಟ್ಟಹೆಜ್ಜೆ ಇಡಲಾಗಿದೆ ಎಂದರು.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಖರೀದಿಸುವ ಜಮೀನುಗಳಿಗೆ ಈ ರಿಯಾಯಿತಿ ಅನ್ವಯ ಆಗುವುದಿಲ್ಲ.  ಉಳಿದ ಯಾವುದೇ ಜಿಲ್ಲೆಗಳಲ್ಲಿ 50 ಎಕರೆವರೆಗೆ ಭೂಮಿ ಖರೀದಿ ಮಾಡಿ ಕೈಗಾರಿಕೆ ಸ್ಥಾಪಿಸಿದರೂ ಈ ಸೌಲಭ್ಯ ದೊರೆಯಲಿದೆ. ಕೆಐಎಡಿಬಿ/ಕೆಎಸ್‌ಎಸ್‌ಐಡಿಸಿ ಯಿಂದ ಖರೀದಿಸಿದ ಭೂಮಿಯ ಮಾರ್ಗದರ್ಶಿ ದರ
ಅಥವಾ ಭೂಮಿಯ ಖರೀದಿ ದರದ ಶೇ 25ರಷ್ಟು ರಿಯಾಯಿತಿ ಸಿಗಲಿದೆ ಎಂದು ವಿವರಿಸಿದರು.

ಇದಲ್ಲದೆ, ಕೈಗಾರಿಕಾ ಘಟಕ ಸ್ಥಾಪನೆ ಮತ್ತು ಯಂತ್ರಗಳ ಖರೀದಿಗೆ ಹೂಡಿಕೆ ಮಾಡುವ ಒಟ್ಟು ಹಣದಲ್ಲಿ ಶೇ 20ರಷ್ಟು ರಿಯಾಯಿತಿ ನೀಡುವುದಾಗಿಯೂ ಅವರು ಘೋಷಿಸಿದರು. ಖರೀದಿ ಮಾಡಲಾದ ಭೂಮಿಯ ನೋಂದಣಿಗೆ ಖರ್ಚು ಮಾಡಿದ ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನೂ ಸರ್ಕಾರವೇ ಪೂರ್ಣ ಮರುಪಾವತಿಸಲಿದೆ. ಭೂ ಪರಿವರ್ತನೆಗೆ ಖರ್ಚು ಮಾಡಿದ ಶುಲ್ಕವನ್ನೂ ಮರುಪಾವತಿ ಮಾಡಲಾಗುವುದು. ಐದು ವರ್ಷಗಳ ಕಾಲ ಪ್ರತಿ ಯೂನಿಟ್‌ಗೆ ಒಂದು ರೂಪಾಯಿ ಸಬ್ಸಿಡಿ ನೀಡಲಾಗುವುದು. ಜತೆಗೆ ಬಳಕೆ ಮಾಡುವ ವಿದ್ಯುತ್‌ ಮೇಲಿನ ತೆರಿಗೆಯನ್ನು ಐದು ವರ್ಷಗಳವರೆಗೆ ಸಂಪೂರ್ಣ ರಿಯಾಯಿತಿ ಕೊಡಲಾಗುವುದು ಹಾಗೂ ಒಟ್ಟಾರೆ ವಹಿವಾಟಿನ ಮೇಲೆ ಶೇ 1ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಹೀಗೆ ವಿನಾಯಿತಿಗಳನ್ನು ಉಪ ಮುಖ್ಯಮಂತ್ರಿ ಪ್ರಕಟಿಸುತ್ತಿದ್ದ ಹಾಗೆಯೇ ವೆಬಿನಾರ್‌ನಲ್ಲಿ ಭಾಗವಹಿಸಿದ್ದ ಉದ್ಯಮಿಗಳು ಸಂತಸ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಹೆಚ್ಚೆಚ್ಚು ಬಂಡವಾಳ ಹೂಡುವ ಭರವಸೆ ನೀಡಿದರು.

ಈಗಾಗಲೇ ಈ ಎಲ್ಲ ಪ್ರಸ್ತಾವನೆಗಳಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ  ಗುರುವಾರ ಸಂಪುಟ ಸಭೆ ನಡೆಯಲಿದ್ದು ಇವೆಲ್ಲಕ್ಕೂ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.
 

SCROLL FOR NEXT