ರಾಜ್ಯ

ಬೆಂಗಳೂರು ಗಲಭೆ; ಸರ್ಕಾರದ ಕ್ಲೈಮ್ ಕಮಿಷನ್ ನೇಮಕ ಭವಿಷ್ಯ ಆ.25ರಂದು ಹೈಕೋರ್ಟ್ ನಲ್ಲಿ ನಿರ್ಧಾರ!

Srinivasamurthy VN

ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದಲೇ ನಷ್ಟ ವಸೂಲಿ ಮಾಡಬೇಕು ಎಂಬ ಸರ್ಕಾರದ ನಿರ್ಧಾರಕ್ಕೆ ಕ್ಲೈಮ್ ಕಮಿಷನರ್ ನೇಮಕ ಮಾಡುವ ಕುರಿತು ಇದೇ ಆಗಸ್ಟ್ 25ರಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡುವ  ಸಾಧ್ಯತೆ ಇದೆ.

ಗಲಭೆಯಲ್ಲಿ ಆದ ನಷ್ಟವನ್ನು ವಸೂಲಿ ಮಾಡುವುದಕ್ಕೆ ಹಾಗೂ ಪರಿಹಾರ ನೀಡುವ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಕ್ಲೇಮ್‌ ಕಮಿಷನರ್‌ ನೇಮಕ ಮಾಡುವಂತೆ ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು  ನ್ಯಾಯಮೂರ್ತಿ ಅಶೋಕ್ ಎಸ್ ಕಿನಗಿ ಅವರು ಅರ್ಜಿಯ ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿದ್ದಾರೆ. ಅಲ್ಲದೆ ಇದೇ ವಿಚಾರವಾಗಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿನ ಅಂಶಗಳನ್ನು ಗುರುತಿಸಿ ಅವುಗಳ ವಿಚಾರಣೆಯನ್ನೂ ಅಂದೇ ನಡೆಸಲು ಕ್ರಮ ಕೈಗೊಳ್ಳಿ ಎಂದೂ ಸೂಚಿಸಿದೆ. 

ಇದಕ್ಕೂ ಮೊದಲು ಕ್ಲೈಮ್ ಕಮಿಷನ್ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ ನವಡ್ಗಿ ಅವರು, ವಾದ ಮಂಡಿಸಿ, ಈ ಹಿಂದೆ ಮಹದಾಯಿ ವಿವಾದದ ವೇಳೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಬಂಧನ ವೇಳೆಯಲ್ಲಿ ಸಂಭವಿಸಿದ್ದ ಹಿಂಸಾಚಾರ ಮತ್ತು ಆ ಸಂಬಂಧ ಕ್ಲೈಮ್  ಕಮಿಷನರ್ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತೀರ್ಪಿನ ಸಂಬಂಧ ದಾಖಲೆಗಳನ್ನು ಹೈಕೋರ್ಟ್ ಗೆ ಸಲ್ಲಿಕೆ ಮಾಡಿದರು. ಇದು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಾಜ್ಯದಲ್ಲಿ ಕ್ಲೈಮ್ ಕಮಿಷನರ್ ನೇಮಕದ ಅರ್ಜಿ ದಾಖಲಾದ ಮೊದಲ ಪ್ರಕರಣವಾಗಿದೆ.

ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ ಕ್ಲೇಮ್‌ ಕಮಿಷನರ್‌ ನೇಮಿಸುವ ಅಧಿಕಾರವನ್ನು ಹೈಕೋರ್ಟ್‌ ಹೊಂದಿದೆ. ಆದರೆ, ಆರೋಪಿಗಳ ವಿರುದ್ಧ ಪ್ರಕರಣ ಸಾಬೀತುಪಡಿಸುವುದು ಮತ್ತು ಜಪ್ತಿ ಮತ್ತು ಹರಾಜು ಪ್ರಕ್ರಿಯೆಗಾಗಿ ಆಸ್ತಿ ಗುರುತಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಪ್ರಕ್ರಿಯೆಯನ್ನು ಭೂ  ಕಂದಾಯ ಕಾಯ್ದೆ ಮತ್ತು ಇತರ ಕೆಲವು ಕಾನೂನುಗಳ ಅಡಿಯಲ್ಲಿಯೇ ನಡೆಸಬೇಕಾಗಿದೆ.
 

SCROLL FOR NEXT