ರಾಜ್ಯ

ವಿಧಾನಸೌಧದಲ್ಲೇ ಸೆ.21ರಿಂದ ಕಲಾಪ ಆರಂಭ: ಕಿಟಕಿ, ಬಾಗಿಲುಗಳ ತೆರೆಯಲು ನಿರ್ಧಾರ

Manjula VN

ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಮುಂದಿನ ತಿಂಗಳು 21ರಿಂದ ನಡೆಸಲು ಉದ್ದೇಶಿಸಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ವಿಧಾನಸೌಧದಲ್ಲಿಯೇ ನಡೆಸಲು ತೀರ್ಮಾನಿಸಲಾಗಿದ್ದು, ಕಲಾಪದ ವೇಳೆ ಕಿಟಕಿ, ಬಾಗಿಲುಗಳ ತೆರೆಯಲು ನಿರ್ಧಾರ ಕೈಗೊಳ್ಳಲಾಗಿದೆ. 

ಸೋಮವಾರ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಆಸನ ವ್ಯವಸ್ಥೆ ಪರಿಶೀಲನೆ ನಡೆಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿಯವರು, ವಿಧಾನಸೌಧದಲ್ಲಿ ಅಧಿವೇಶನ ನಡೆಸುವ ಸಭಾಧ್ಯಕ್ಷ ಕಾಗೇರಿ ಅವರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ವಿಧಾನಸಭೆಯಲ್ಲಿ ಒಟ್ಟು 274 ಆಸನಗಳು ಇವೆ. ಅಂತರ ಕಾಪಾಡಿಕೊಳ್ಳಲು ಎರಡು ಸೀಟುಗಳ ಮಧ್ಯೆ ಗಾಜಿನ ಪರದೆ ಅಳವಡಿಸಲಾಗುವುದು. ಕೆಲವು ಕಡೆ ಮಧ್ಯದ ಆತನ ಖಾಲಿ ಇರಿಸಲಾಗುವುದು. ಸದಸ್ಯರಿಗೆ ಫೇಸ್ ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. 

ಸಾರ್ವಜನಿಕರ ಗ್ಯಾಲರಿಯಲಲಿ ಈ ಬಾರಿ ಜನರಿಗೆ ಪ್ರವೇಶ ನಿರ್ಬಂಧಿಸಬೇಕೇ ಅಥವಾ ಕಡಿಮೆ ಮಾಡಬೇಕೇ ಎಂಬ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು. ಅದೇ ರೀತಿ ಅಧಿಕಾರಿಗಳ ಗ್ಯಾಲರಿಯಲ್ಲಿ ಕೇವಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಥವಾ ಸಂಬಂಧಪಟ್ಟ ಇಲಾಖೆಯ ಒಬ್ಬ ಅಧಿಕಾರಿ ಹಾಗೂ ಸಚಿವರ ಒಬ್ಬ ಆಪ್ತಕಾರ್ಯದರ್ಶಿಗೆ ಪ್ರವೇಶ ಕಲ್ಪಿಸಲು ಯೋಚಿಸಲಾಗಿದೆ. ವಿಧಾನ ಪರಿಷತ್ ನಲ್ಲೂ ಸಹ ಇದೇ ಮಾದರಿ ಅನುಸರಿಸಲಾಗುವುದು ಎಂದು ವಿವರಿಸಿದ್ದರು. 

70 ವರ್ಷ ಮೇಲ್ಪಟ್ಟ ಸುಮಾರು 30 ಸದಸ್ಯರಿದ್ದಾರೆ. ಅವರಿಗೆ ಕಲಾಪದಲ್ಲಿ ಭಾಗವಹಿಸುವುದರಿಂದ ವಿನಾಯಿತಿ ನೀಡುವ ಅಗತ್ಯ ಕಾಣುತ್ತಿಲ್ಲ. ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. 

ಪತ್ರಕರ್ತರ ಗ್ಯಾಲರಿಯಲ್ಲಿ ದೈಹಿಕ ಅಂತರ ಕಾಪಾಡಿಕೊಂಡು ವರದಿ ಮಾಡುವ ಸಂಬಂಧ ಮಾಧ್ಯಮದವರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

SCROLL FOR NEXT