ರಾಜ್ಯ

ಆಂದೋಲನದ ಸ್ವರೂಪ ಪಡೆದುಕೊಂಡ ಮಲಪ್ರಭಾ ನದಿ ಒತ್ತುವರಿ ತೆರವು ಹೋರಾಟ!

Vishwanath S

ಬಾಗಲಕೋಟೆ: ಅಲ್ಪ ಮಳೆಗೂ ರೌದ್ರ ಸ್ವರೂಪ ತಾಳುವ ಮಲಪ್ರಭಾ ನದಿಯ ರೌದ್ರತೆಯನ್ನು ತಣ್ಣಗಾಗಿಸುವ ಪ್ರಯತ್ನಕ್ಕೆ ಜನಪ್ರತಿನಿಧಿಗಳೇ ಮನಸ್ಸು ಮಾಡಿರುವ ಹಿನ್ನೆಲೆಯಲ್ಲಿ ನದಿ ಒತ್ತುವರಿ ತೆರವು ಹೋರಾಟ ಇದೀಗ ಆಂದೋಲನದ ರೂಪ ಪಡೆದುಕೊಂಡಿದೆ.

ಬೆಳಗಾವಿ ಜಿಲ್ಲೆಯ ಕಣಕುಂಬಿ ಬಳಿ ಹುಟ್ಟಿ ಕೂಡಲಸಂಗಮದಲ್ಲಿ ಕೃಷ್ಣಾ ನದಿ ಸೇರುವ ಮಲಪ್ರಭಾ ನದಿ ಕಳೆದ ಎರಡುವರೆ ದಶಕಗಳಿಂದಲೂ ಒಂದಿಲ್ಲೊಂದು ಕಾರಣಕ್ಕಾಗಿ ಸಾಕಷ್ಟು ಪ್ರಚಲಿತದಲ್ಲಿದ್ದು, ಕಳೆದೊಂದು ದಶಕದಿಂದ ನದಿಯಲ್ಲಿ ಆಗಾಗ್ಗೆ ಕಾಣಿಸಿಳ್ಳುವ ಪ್ರವಾಹದ ರೌದ್ರಾವತಾರಕ್ಕೆ ನದಿ ತೀರದ ಜನತೆ ಕಂಗೆಟ್ಟು ಹೋಗಿದ್ದಾರೆ. ನದಿಯ ಪ್ರವಾಹದ ಅಬ್ಬರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕೂಡ ಇದೀಗ ಚಿಂತಿಸುತ್ತಿರುವುದು ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಮಲಪ್ರಭಾ ನದಿದಂಡೆಯ ಪ್ರದೇಶ ಒತ್ತುವರಿ ಆಗುತ್ತಿದೆ. ಜತೆಗೆ ಹೂಳು ತುಂಬುತ್ತಿದೆ. ಎರಡನ್ನೂ ತಡೆಯಬೇಕು ಎನ್ನುವ ಕೂಗು ಎಂಭತ್ತರ ದಶಕದಲ್ಲೇ ಆರಂಭಗೊಂಡಿದೆ. ಅಂದು ಆರಂಭಗೊಂಡ ಕೂಗು ಇಂದಿಗೂ ನಿಂತಿಲ್ಲ. ಒತ್ತುವರಿ ಮತ್ತು ಹೂಳಿನ ಪ್ರಮಾಣ ಹೆಚ್ಚುತ್ತಲೇ ಇದೆ. ಪರಿಣಾಮವಾಗಿ ನದಿಯಲ್ಲಿನ ಒತ್ತುವರಿ ತೆರವುಗೊಳಿಸಬೇಕು. ಹೂಳು ತೆಗೆಯಿಸಬೇಕು ಎನ್ನುವ ಕೂಗು ಹೋರಾಟದ ಸ್ವರೂಪ ಪಡೆದುಕೊಂಡು ಲೋಕಾಯುಕ್ತಕ್ಕೆ ದೂರು ಹೋಗಿ ಒತ್ತುವರಿ ಸರ್ವೇ ಆಗಬೇಕು. ಹೂಳನ್ನು ತೆರವುಗೊಳಿಸಬೇಕು ಎನ್ನುವ ಆದೇಶವಾಗಿ ದಶಕವೇ ಕಳೆಯುತ್ತ ಬಂದಿದೆ.

ಲೋಕಾಯುಕ್ತ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರಾಮದುರ್ಗ ಬಳಿ 7 ಕಿಮಿ. ವರೆಗಿನ ನದಿ ತೀರದ ಪ್ರದೇಶದಲ್ಲಿನ ಒತ್ತುವರಿ ಸರ್ವೆ ನಡೆದು ಹೂಳು ತೆಗೆಸುವ ಕೆಲಸ ನಡೆದಿದೆ. ಆದರೆ ಕೂಡಲ ಸಂಗಮದವರೆಗೂ ಈ ಕಾರ್ಯ ನಡೆಯಬೇಕು ಎನ್ನುವ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಸಿಕ್ಕಿಲ್ಲ.

ನದಿ ತೀರದ ಎರಡೂ ಪ್ರದೇಶದಲ್ಲಿ ಅತಿಯಾದ ಒತ್ತುವರಿ, ಪ್ರತಿವರ್ಷ ಹೆಚ್ಚುತ್ತಿರುವ ಹೂಳಿನ ಪ್ರಮಾಣ ಹಾಗೂ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಬ್ರಿಡ್ಜ ಕಮ್ ಬ್ಯಾರೇಜ್‌ಗಳ ನಿರ್ಮಾಣದಿಂದಾಗಿ ನದಿಯಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರವಾಹ ಕಾಣಿಸಿಕೊಂಡರೂ ಅತಿಯಾದ ಆಸ್ತಿಪಾಸ್ತಿ, ಬೆಳೆಹಾನಿ ಅನುಭವಿಸಬೇಕಾಗಿದೆ. ನದಿ ತೀರದ ಜನತೆ ಪ್ರತಿ ಮಳೆಗಾಲದಲ್ಲೂ ಆತಂಕದಲ್ಲೇ ಕಾಲ ಕಳೆಯಬೇಕಾಗಿದೆ. ಸರ್ಕಾರದ ಪಾಲಿಗೂ ಪ್ರವಾಹ ಸ್ಥಿತಿ ಎದುರಿಸುವುದು ಸವಾಲಿನ ಪ್ರಶ್ನೆಯಾಗಿ ಪರಿಣಮಿಸಿದೆ.
ಏತನ್ಮಧ್ಯೆ ಪ್ರತಿವರ್ಷದ ಪ್ರವಾಹಕ್ಕೆ ಅತಿಯಾದ ಒತ್ತುವರಿ ಮತ್ತು ಹೂಳು ಕಾರಣವಾಗಿದ್ದು, ಒತ್ತುವರಿ ಹಾಗೂ ಹೂಳನ್ನು ತೆರವುಗೊಳಿಸಬೇಕು ಹೋರಾಟ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಒತ್ತುವರಿ ಹಾಗೂ ಹೂಳನ್ನು ತೆರವುಗೊಳಿಸಬೇಕು ಎನ್ನುವ ಹೋರಾಟ ರಾಜಕೀಯ ಆಂದೋಲನವಾಗಿ ರೂಪುಗೊಂಡಿದೆ. ಸರ್ಕಾರದಲ್ಲಿರುವ ಮತ್ತು ಪ್ರತಿಪಕ್ಷದಲ್ಲಿರುವ ಜನಪ್ರತಿನಿಧಿಗಳೇ ಮಲಪ್ರಭಾ ನದಿ ದಂಡೆಯ ಒತ್ತುವರು ಮತ್ತು ಹೂಳು ತೆರವುಗೊಳಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. 

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ನೀರಾವರಿ ಸಚಿವ ರಮೇಶ್ ಜಾರಕಿಹೊಳಿ, ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ನದಿತೀರದ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಭಾಗದ ಜನಪ್ರತಿನಿಧಿಗಳ ಆಗ್ರಹಕ್ಕೆ ಮಣಿದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಒತ್ತುವರಿ ತೆರವಿನ ಹಿನ್ನೆಲೆಯಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಒತ್ತುವರಿ ಸರ್ವೆಗೆ ಆದೇಶಿಲು ನೀರಾವರಿ ಸಚಿವರಿಗೆ ಸೂಚಿಸುವುದಾಗಿ ಪ್ರಕಟಿಸಿದ್ದಾರೆ. ಇದು ಅಂದುಕೊಂಡಷ್ಟು ಸುಲಭದ ಕಾರ್ಯವಲ್ಲವಾದರೂ ಸರ್ಕಾರ ಮನಸ್ಸು ಮಾಡಿದಲ್ಲಿ ಸಾಧ್ಯವಾಗಿಸಬಹುದಾಗಿದೆ. ಈ ಕುರಿತ ಪ್ರಾಯೋಗಿಕ ಕಾರ್ಯ ರಾಮದುರ್ಗದ ಬಳಿ ನದಿ ತೀರದಲ್ಲಿ ನಡೆದಿದೆ. ಹಾಗೆ ಇತರ ಕಡೆಗಳಲ್ಲೂ ಸರ್ವೇ ಮಾಡಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬಹುದಾಗಿದೆ. ಈ ಕಾರ್ಯಕ್ಕೆ ನದಿ ತೀರದ ರೈತರು ಸರ್ಕಾರದೊಂದಿಗೆ ಸಹಕರಿಸಬೇಕಿರುವುದು ಅನಿವಾರ್ಯವಾಗಿದೆ. 

ಮಹಾದಾಯಿ ನ್ಯಾಯಧೀಕರಣ ತೀರ್ಪಿನ ಅಧಿಸೂಚನೆ ಹೊರಬಿದ್ದು ಮಹಾದಾಯಿ, ಕಳಸಾ – ಬಂಡೂರಿ ನಾಲಾ ಯೋಜನೆಗಳು ಅನುಷ್ಟಾನಗೊಂಡ ಬಳಿಕ ಪ್ರತಿವರ್ಷ ಮಳೆಗಾಲದಲ್ಲಿ ನದಿಗೆ ಇನ್ನಷ್ಟು ಪ್ರವಾಹ ಸಾಧ್ಯತೆ ಇರುವುದರಿಂದ ಈಗಲೇ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇ ಬೇಕಿದೆ. ಒತ್ತುವರಿ ತೆರವಿನ ವೇಳೆ ಸದ್ಯ ನಿರ್ಮಾಣಗೊಂಡಿರುವ ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಬಹುದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಸೂಕ್ತ ಕ್ರಮಗಳ ಮೂಲಕ ಸರ್ಕಾರ ಶಾಶ್ವತ ಪರಿಹಾರ ಕಂಡು ಹಿಡಿಯುವ ಕಾರ್ಯಕ್ಕೆ ಮುಂದಾಗಬೇಕಿದೆ.

ಮಲಪ್ರಭಾ ನದಿ ದಂಡೆಯ ಒತ್ತುವರಿ ಹಾಗೂ ನದಿಯಲ್ಲಿನ ಹೂಳು ತೆರವುಗೊಳಿಸಬೇಕು ಎನ್ನುವ ಎಂಭತ್ತರ ದಶಕದಲ್ಲಿನ ಹೋರಾಟ ಇಂದು ರಾಜಕೀಯ ಆಂದೋಲನವಾಗಿ ರೂಪಗೊಂಡಿರುವುದು ನದಿ ತೀರದ ಜನತೆ ಪಾಲಿಗೆ ಬಹುದೊಡ್ಡ ಆಶಾಕಿರಣವಾಗಿ ಕಾಣಿಸಿಕೊಂಡಿದೆ. ರಾಜಕೀಯ ಆಂದೋಲನ ಸಂಪೂರ್ಣ ಯಶಸ್ವು ಕಾಣದಲ್ಲಿ ನದಿ ತೀರದ ಜನತೆಯ ಸಹಕಾರವೇ ಮುಖ್ಯವಾಗಿದೆ. ಒಮ್ಮೆ ಒತ್ತುವರಿ ಹಾಗೂ ಹೂಳು ತೆರವುಗೊಂಡಲ್ಲಿ ಪ್ರತಿವರ್ಷ ಎದುರಾಗುವ ಪ್ರವಾಹ ಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಲಿದೆ.  ಪ್ರತಿವರ್ಷ ನದಿ ತೀರದ ಗ್ರಾಮಗಳ ಜನತೆ ಪ್ರವಾಹದ ಭಯದಿಂದ ಎತ್ತರದ ಪ್ರದೇಶಗಳಿಗೆ ಅಲೆಯುವುದು ತಪ್ಪಲಿದೆ. ಎಷ್ಟು ಬೇಗ ಸರ್ಕಾರ ಜನಪ್ರತಿನಿಧಿಗಳ ಆಗ್ರಹದ ಕಾರ್ಯಾನುಷ್ಠಾನಕ್ಕೆ ಮುಂದಾಗುತ್ತದೋ ಅಷ್ಟು ಬೇಗೆ ನದಿ ತೀರದ ಜನತೆ ಮತ್ತು ಸರ್ಕಾರಕ್ಕೆ ನದಿಯಲ್ಲಿ ಉಂಟಾಗುತ್ತಿರುವ ಪ್ರವಾಹದ ತಲೆನೋವು ಕಡಿಮೆ ಆಗಲಿದೆ ಎನ್ನುವುದು ಒತ್ತುವರಿ ತೆರವು ಹೋರಾಟಗಾರರ ಅಭಿಪ್ರಾಯವಾಗಿದೆ.

ವರದಿ- ವಿಠ್ಠಲ ಆರ್. ಬಲಕುಂದಿ

SCROLL FOR NEXT