ರಾಜ್ಯ

ಬೆಂಗಳೂರು: 130 ಬೆಡ್ ಗಳ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

Shilpa D

ಬೆಂಗಳೂರು: ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದು, ಶೇ 1%ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿಗೆ ಐಸಿ ಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದ ಚೇತರಿಕೆ ಪ್ರಮಾಣ ಶೇ.70% ಇದ್ದು, ಮರಣ ಪ್ರಮಾಣ ಶೇ.1.69%ರಷ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

ಶಿವಾಜಿನಗರದಲ್ಲಿ 130 ಬೆಡ್ ಗಳ ಕೋವಿಡ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, "ಬಿಬಿಎಂಪಿಯ ಕಟ್ಟಡ ನಾಲ್ಕು ವರ್ಷಗಳಿಂದ ಖಾಲಿ ಇತ್ತು. ಇಂತಹ ಸಂದರ್ಭದಲ್ಲಿ 20-25 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸುವ ಆಲೋಚನೆ ಬಂದಿತ್ತು. ಆದರೆ ಕೋವಿಡ್ ಸಂಕಷ್ಟವಿದ್ದ ಹಿನ್ನೆಲೆಯಲ್ಲಿ, ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರನ್ನು ಮನವಿ ಮಾಡಿದ್ದೆ. ಅವರು ತಕ್ಷಣ ಸ್ಪಂದಿಸಿ 11 ಕೋಟಿ ರೂ. ಮೌಲ್ಯದ ಉಪಕರಣಗಳನ್ನು ನೀಡಿದರು ಎಂದು ಹೇಳಿದ್ದಾರೆ. 

ಪುರುಷರ ಚಿಕಿತ್ಸೆಗೆ 60, ಮಹಿಳೆಯರಿಗೆ 50 ಹಾಗೂ ಮಕ್ಕಳಿಗೆ 20 ಹಾಸಿಗೆಗಳ ಸೌಕರ್ಯವನ್ನು ಆಸ್ಪತ್ರೆಯಲ್ಲಿ ಕಲ್ಪಿಸಲಾಗಿದೆ. ಆಮ್ಲಜನಕ ಪೂರಣ ವ್ಯವಸ್ಥೆಯ 20 ಹಾಸಿಗೆ ಸಾಮರ್ಥ್ಯದ ತುರ್ತು ನಿಗಾ ಘಟಕವಿದೆ (ಐ.ಸಿ.ಯು). 20 ವೆಂಟಿಲೇಟರ್‌ಗಳನ್ನೂ ಕಲ್ಪಿಸಲಾಗಿದೆ. 30 ಎಂಬಿಬಿಎಸ್ ವೈದ್ಯರು, ಶಸ್ತ್ರಚಿಕಿತ್ಸಾ ತಜ್ಞರು, ಹೃದ್ರೋಗ ತಜ್ಞರು, ರೇಡಿಯಾಲಜಿಸ್ಟ್ ಸೇರಿದಂತೆ 10 ತಜ್ಞ ವೈದ್ಯರು, ಒಬ್ಬರು ಅಧೀಕ್ಷಕ ವೈದ್ಯರು, ಇಬ್ಬರು ಫಾರ್ಮಸಿಸ್ಟ್‌ಗಳು, ಇಬ್ಬರು ಆಹಾರ ತಜ್ಞೆ, 6 ಶುಶ್ರೂಷಕರು, 6 ಪ್ರಯೋಗಾಲಯ
ತಂತ್ರಜ್ಞರು, 15 ಭದ್ರತಾ ಸಿಬ್ಬಂದಿ ಹಾಗೂ 60 ಡಿ–ಗುಂಪಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕೊರೋನಾ ಸಂದರ್ಭದಲ್ಲಿ ಹಗಲು ರಾತ್ರಿ ಶ್ರಮಿಸುತ್ತಿರುವ  ಕೊರೋನಾ ವಾರಿಯರ್ಸ್ ಗಳನ್ನು ಸಿಎಂ ಯಡಿಯೂರಪ್ಪ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಸತಿ ಸಚಿವ ವಿ.ಸೋಮಣ್ಣ ಉಪಸ್ಥಿತರಿದ್ದರು.

SCROLL FOR NEXT