ರಾಜ್ಯ

ಬಾಗಲಕೋಟೆ: ಮಲಪ್ರಭೆಯ ಒತ್ತುವರಿ ಒಡಲಲ್ಲಿ ಬಗೆದಷ್ಟು ಬಂಗಾರ

Lingaraj Badiger

ಬಾಗಲಕೋಟೆ: ಮೇಲಿಂದ ಮೇಲೆ ಉಂಟಾಗುತ್ತಿರುವ ಪ್ರವಾಹ ಮತ್ತು ಅತಿಯಾದ ಒತ್ತುವರಿ ಪರಿಣಾಮ ಮಲಪ್ರಭಾ ನದಿ ರಾಜ್ಯದ ಗಮನ ಸೆಳೆದಿದ್ದು, ಮಲಪ್ರಭಾ ನದಿ ದಂಡೆಯ ಒತ್ತುವರಿ ಪ್ರದೇಶದಲ್ಲಿ ಬಗೆದಷ್ಟು ಮರಳು ಲಭ್ಯವಾಗಲಿರುವುದರಿಂದ ಎಲ್ಲರ ಚಿತ್ತ ಅದರತ್ತಲೇ ನೆಟ್ಟಿದೆ.

ಕೂಡಲ ಸಂಗಮದಲ್ಲಿ ಕೃಷ್ಣೆಯ ಒಡಲನ್ನು ಸೇರುವ ಮಲಪ್ರಭಾ ನದಿಗೆ ೧೯೬೯ ರಲ್ಲಿ ಸವದತ್ತಿ ತಾಲೂಕು ಮುನವಳ್ಳಿ ಬಳಿ ಅಣೆಕಟ್ಟು ಕಟ್ಟಿದ ಬಳಿಕ ನದಿ ದಂಡೆಯ ಪ್ರದೇಶ ನಿಧಾನವಾಗಿ ಒತ್ತುವರಿ ಆಗುತ್ತಲೇ ಬಂದಿದೆ. ಜತೆಗೆ ಇತ್ತೀಚಿನ ವರ್ಷಗಳಲ್ಲಿ ನದಿ ತೀರದ ಗ್ರಾಮಗಳ ಜನ ಹಾಗೂ ಜಾನುವಾರುಗಳಿಗೆ ಶಾಶ್ವತ ಕುಡಿವ ನೀರು ಒದಗಿಸಬೇಕು ಎನ್ನುವ ಕಲ್ಪನೆಯೊಂದಿಗೆ ಎಲ್ಲೆಂದರಲ್ಲಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಒಂದು ಕಡೆ ಎಗ್ಗಿಲ್ಲದೆ ನದಿ ದಂಡೆಯ ಪ್ರದೇಶ ಒತ್ತುವರಿ ಇನ್ನೊಂದು ಕಡೆ ಹೂಳಿನ ಪ್ರಮಾಣ ಹೆಚ್ಚಾಗುತ್ತಿದೆ. ಪರಿಣಾಮವಾಗಿ ನದಿಯ ನೀರಿನ ಹರಿಯುವಿಕೆ ಪಾತ್ರ ತೀರಾ ಕಡಿಮೆ ಆಗಿದೆ.

ನವಿಲುತೀರ್ಥ ಜಲಾಶಯ ನಿರ್ಮಾಣಕ್ಕೂ ಮುನ್ನ ೧೩೫ ಮೀಟರ್‌ವರೆಗೂ ಅಗಲವಾಗಿದ್ದ ನದಿಯ ಅಗಲ ಈಗ ೧೦ ಮೀಟರ್‌ವರೆಗೂ ಮಾತ್ರ ಉಳಿದಿದೆ. ಈ ಮೊದಲು ನದಿಯ ಎರಡೂ ದಂಡೆಯಲ್ಲಿ ಚಿನ್ನಕ್ಕಿಂತಲೂ ಹೆಚ್ಚು ಮೌಲ್ಯ ಹೊಂದಿರುವ ಅಪಾರ ಮರಳಿನ ರಾಶಿ ಕಾಣಿಸುತ್ತಿತ್ತು. ಜತೆಗೆ ಜಲಚರ ಪ್ರಾಣಿಗಳ ಕಲರವ ಬೆರೆ. ಕೆಲ ವರ್ಷ ಮಳೆ ಸರಿಯಾಗಿ ಆಗದಿದ್ದರೂ ನದಿಯ ಇಕ್ಕೆಲಗಳಲ್ಲಿನ ಮರಳಲ್ಲಿ ನೀರು ಸಂಗ್ರಹಣೆಯಿಂದಾಗಿ ನದಿ ಸಣ್ಣದಾಗಿ ಹರಿಯುತ್ತಲೇ ಇತ್ತು. 

ಮನುಷ್ಯನ ದುರಾಸೆ ಪರಿಣಾಮ ಇಂದು ನದಿ ದಂಡೆ ಪ್ರದೇಶ ಒತ್ತುವರಿ ಜತೆಗೆ ಹೂಳು ತುಂಬಿ ಮಳೆಗಾಲದಲ್ಲೂ ಚರಂಡಿ ಮಾದರಿಯಲ್ಲಿ ಹರಿಯುತ್ತದೆ. ಆದರೆ ಖಾನಾಪುರ ಭಾಗದಲ್ಲಿ ಮಳೆ ಸಾಕಷ್ಟು ಆಗುತ್ತಲೇ ನದಿಗೆ ನೀರು ಬಿಟ್ಟರೆ ಪ್ರವಾಹ ಕಾಣಿಸಿಕೊಂಡು ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿ ಪಾಸ್ತಿ ಹಾನಿ ಆಗುತ್ತಿದೆ. ನದಿಯ ಪ್ರವಾಹ ತೀವ್ರತೆಗೆ ಕಡಿವಾಣ ಹಾಕಲು ಸರ್ಕಾರ ಒತ್ತುವರಿ ತೆರವಿಗೆ ಮನಸ್ಸು ಮಾಡಿದ್ದು, ನದಿಯ ಒತ್ತುವರಿ ಎಷ್ಟಾಗಿದೆ ಎನ್ನುವ ಕುರಿತು ಸರ್ವೇಗೂ ಸಜ್ಜಾಗಿ ಸಮಿತಿಯೊಂದು ರಚಿಸಿ ವೈಜ್ಞಾನಿಕ ವರದಿ ಪಡೆದುಕೊಳ್ಳಲು ಮುಂದಾಗಿದೆ. 

ಸರ್ಕಾರ ನದಿ ದಂಡೆಯ ಒತ್ತುವರಿ ಕುರಿತು ವರದಿ ಪಡೆಯಲು ಸಾಕಷ್ಟು ಸಮಯ ಹಿಡಿಯಲಿದೆಯಾದರೂ ಒತ್ತುವರಿ ಜಮೀನಿನ ಕೆಳಭಾಗದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಮರಳು ಇದ್ದು, ರಾಶಿರಾಶಿ ಮರಳಿನ ಮೇಲೆ ಕೆಲ ಮರಳು ದೋರೆಗಳ ಕಣ್ಣು ಬಿದ್ದಿದೆ. 
ಈಗಾಗಲೇ ನದಿ ದಂಡೆಯ ಜಮೀನುಗಳ ಎರೆ ಮಣ್ಣಿನ ಕೆಳಭಾಗದಲ್ಲಿನ ಮರಳನ್ನು ಬಹುದೊಡ್ಡ ಪ್ರಮಾಣದಲ್ಲಿ ಬಗೆದು ತೆಗೆಯುವ ಕೆಲಸ ಅವ್ಯಾಹತವಾಗಿ ನಡೆದಿದೆ. 

ಒಂದೊಮ್ಮೆ ನದಿ ದಂಡೆಯ ಒತ್ತುವರಿ ಜಮೀನು ಸರ್ವೇ ಬಳಿಕ ಅದು ಸರ್ಕಾರದ ಪಾಲಾಗಲಿದೆ ಎನ್ನುವ ಭಯ ಒತ್ತುವರಿ ಜಮೀನುಗಳ ಮಾಲೀಕರು ಮತ್ತು ಮರಳು ಗುತ್ತಿಗೆದಾರರನ್ನು ಈಗಲೇ ಕಾಡಲಾರಂಭಿಸಿದೆ.

ನದಿ ದಂಡೆಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವ ಬಹುತೇಕ ಜನ ರೈತರು ತಮ್ಮ ಜಮೀನುಗಳ ಎರೆ ಮಣ್ಣಿನ ಕೆಳಗೆ ಇರುವ ಮರಳಿನ ಬಗ್ಗೆ ತಲೆ ಕಡೆಸಿಕೊಳ್ಳದೇ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಸರ್ಕಾರ ಇದೀಗ ಒತ್ತುವರಿ ಜಮೀನು ಸರ್ವೇಗೆ ಮುಂದಾಗಿರುವುದರಿAದ ಜಮೀನು ಕೆಳ ಭಾಗದಲ್ಲಿನ ಮರಳನ್ನು ಮಾರಾಟ ಮಾಡುವ ಮೂಲಕ ಸಾಕಷ್ಟ ಹಣ ಮಾಡಿಕೊಳ್ಳಬಹುದು ಎನ್ನುವ ಆಲೋಚನೆಗೆ ಬಿದ್ದಿದ್ದಾರೆ. ಇದಕ್ಕೆ ಕೆಲ ಮರಳು ಗುತ್ತಿಗೆದಾರರೂ ಪ್ರೋತ್ಸಾಹ ನೀಡಲಾರಂಭಿಸಿದ್ದಾರೆ ಎನ್ನುವ ದೂರುಗಳು ಸಾಕಷ್ಟಿವೆ. 

ಸರ್ಕಾರ ಒಮ್ಮೆ ನದಿ ದಂಡೆಯ ಒತ್ತುವರಿ ಜಮೀನು ಸರ್ವೇ ಮಾಡಿದ ಬಳಿಕ ಒತ್ತುವರಿ ಜಮೀನುಗಳು ರೈತರ ಕೈ ತಪ್ಪಲಿವೆ. ಜತೆಗೆ ಜಮೀನುಗಳ ಕೆಳಭಾಗದಲ್ಲಿನ ಮರಳು ಕೂಡ ಸರ್ಕಾರದ ಪಾಲಾಗಲಿದೆ. ಸರ್ವೆಗೂ ಮುನ್ನ ಮರಳು ಮಾರಾಟ ಮಾಡಿ ಎನ್ನುವ ಸಲಹೆಯ ದುರಾಸೆಗೆ ರೈತರು ಬಲಿಯಾಗುವ ಸಾಧ್ಯತೆಗಳು ನಿಚ್ಚಳವಾಗುತ್ತಿವೆ.

ಮಲಪ್ರಭಾ ನದಿ ತೀರದಲ್ಲಿನ ಗ್ರಾಮಗಳ ಜನತೆಯ ರಕ್ಷಣೆಗೆ ಮುಂದಾಗಿರುವ ಜನಪ್ರತಿನಿಧಿಗಳು ಒತ್ತುವರಿ ಜಮೀನು ಸರ್ವೇಯ ಜತೆಗೆ ಆ ಜಮೀನುಗಳಲ್ಲಿ ಅಡಗಿರುವ ಸಾವಿರಾರು ಕೋಟಿ ರೂ. ಮೌಲ್ಯದ ಮರಳಿನ ರಕ್ಷಣೆಗೂ ಮುಂದಾಗಬೇಕಿದೆ. ಇಲ್ಲದೆ ಹೋದಲ್ಲಿ ಸರ್ಕಾರದ ಪಾಲಾಗಬೇಕಿರುವ ರಾಶಿ ರಾಶಿ ಮರಳು, ಮರಳು ಮಾಫಿಯಾ ಪಾಲಾಗಲಿದೆ. ನದಿ ಸಂರಕ್ಷಣೆ ಹೋರಾಟಗಾರರು ಇತ್ತ ಚಿತ್ತ ಹರಿಸಬೇಕಿದೆ.
-ವಿಠ್ಠಲ ಆರ್. ಬಲಕುಂದಿ

SCROLL FOR NEXT