ರಾಜ್ಯ

ಪೀರನವಾಡಿಯಲ್ಲಿ ಉದ್ವಿಗ್ನ ಸ್ಥಿತಿ, ಲಾಠಿ ಪ್ರಹಾರ: ಶಾಂತಿ ಕಾಪಾಡುವಂತೆ ಸಿಎಂ ಮನವಿ

Lingaraj Badiger

ಬೆಂಗಳೂರು: ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿರೋಧಿಸಿ ನೆಡೆದ ಗಲಾಟೆ ಹಾಗೂ ಲಾಠಿ ಚಾರ್ಜ್ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಮಾತನಾಡುತ್ತೇನೆ ಎಂದು ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಬಗ್ಗೆ ಮಾಹಿತಿ ಪಡೆದು ಕೊಳ್ಳುತ್ತೇನೆ. ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಮಾತನಾಡುತ್ತೇನೆ ಎಂದರು. ಈ ಸಂಬಂಧ ಹೆಚ್ಚಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡುತ್ತೇನೆ ಎಂದರು.

ಶಿಕ್ಷಣ ಇಲಾಖೆ ಸಭೆಯ ಬಳಿಕ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ್ ಗೆ ದೂರವಾಣಿ ಕರೆ ಮಾಡಿ ಮಾತನಾಡಿ ಎರಡು ಕಡೆಯ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿ ಸಂಧಾನ ನಡೆಸುವಂತೆ ಸೂಚಿಸಿದರು.
 
ಪ್ರತಿಮೆ ಸ್ಥಾಪಿಸಲಾಗಿರುವ ಪ್ರದೇಶದಲ್ಲಿ ಹೆಚ್ಚಿನ ಪೋಲಿಸ್ ಪಡೆ ನಿಯೋಜಿಸುವುದು ಹಾಗೂ ಇತರೆ ಮುನ್ನಚ್ಚರಿಕೆ ಕ್ರಮಗಳನ್ನ ಕೈಗೊಳ್ಳುವಂತೆಯೂ ಇದೇ ವೇಳೆ ಅವರು ನಿರ್ದೇಶನ ನೀಡಿದ್ದಾರೆ. ಅಲ್ಲದೆ ತಕ್ಷಣ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಹಾಗೂ ಶಾಂತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪೀರನವಾಡಿಯಲ್ಲಿ ಉದ್ವಿಗ್ನ ಸ್ಥಿತಿ, ಲಾಠಿ ಪ್ರಹಾರ
ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ನಂತರ ಬೆಳಗಾವಿಯ ಪೀರನವಾಡಿಯಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ, ಪ್ರತಿಭಟನಾಕಾರರನ್ನು ಚೆದುರಿಸಲು ಪೊಲೀಸರು ಲಾಠಿ ಪ್ರವಾಹ ನಡೆಸಿದರು.

ರಾಯಣ್ಣ ಪ್ರತಿಮೆ ಮರುಸ್ಥಾಪನೆ ಬಳಿಕ ವಿಜಯೋತ್ಸವ ನಡೆಸಲು ಬೈಕ್ ಮೂಲಕ ಮೆರವಣಿಗೆ ತೆರಳುತ್ತಿದ್ದ ವೇಳೆ ಎಂಇಎಸ್ ಕಾರ್ಯಕರ್ತರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಎಂಇಎಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದರು.

SCROLL FOR NEXT