ರಾಜ್ಯ

ವಿಜಯಪುರ ಜಿಲ್ಲೆಯಲ್ಲಿ ದಲಿತ ಯುವಕನ ಹತ್ಯೆ, ಬಿಜೆಪಿ ಕೊಲೆಗಡುಕರಿಗೆ ಬೆಂಬಲ ನೀಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪ

Sumana Upadhyaya

ವಿಜಯಪುರ: ದೇವಸ್ಥಾನದ ಕಟ್ಟೆ ಮೇಲೆ ಮೇಲ್ಜಾತಿಯವರೊಂದಿಗೆ ಕುಳಿತ 28 ವರ್ಷ ದಲಿತ ಯುವಕನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿರುವ ಅಮಾನುಷ ಘಟನೆ ವಿಜಯಪುರ ಜಲ್ಲೆಯ ಸಿಂದಗಿ ತಾಲ್ಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಅನಿಲ್ ಇಂಗಳಗಿ ಎಂದು ಗುರುತಿಸಲಾಗಿದ್ದು ಬೂದಿಹಾಳ ಗ್ರಾಮದವರಾಗಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಮೃತ ಯುವಕನ ತಂದೆ ದೂರಿನಲ್ಲಿ ಹೇಳಿದ್ದೇನು?:ಮೇಲ್ಜಾತಿಯ ಇಬ್ಬರಾದ ಸಿದ್ದು ಬಿರಾದಾರ್(25ವ) ಮತ್ತು ಸಂತೋಷ್ ಹಿರ್ಲಕುಂಡ್(23ವ) ದೇವಸ್ಥಾನದ ಮುಂದೆ ತಮ್ಮ ಜೊತೆ ನನ್ನ ಮಗ ಕುಳಿತದ್ದಕ್ಕೆ ವಿರೋಧ ವ್ಯಕ್ತಪಡಿಸಿ ಜಗಳ ತೆಗೆದರು. ಇದು ನಡೆದಿದ್ದು ಮೊನ್ನೆ ಆಗಸ್ಟ್ 24ರಂದು ಸಾಯಂಕಾಲ. ಜಗಳ ತಾರಕಕ್ಕೇರಿ ಹಲ್ಲೆ ನಡೆದು ನನ್ನ ಮಗನಿಗೆ ಬೆದರಿಕೆ ಕೂಡ ಹಾಕಿದರು.
ಹೀಗೆ ಕೆಲ ದಿನಗಳವರೆಗೆ ಜಗಳ ಸಾಗಿತು. ನಂತರ ಒಂದು ದಿನ ರಸ್ತೆಬದಿ ನನ್ನ ಮಗ ಬೆಳಗಿನ ಹೊತ್ತು ಉಪಾಹಾರ ಸೇವಿಸುತ್ತಿದ್ದಾಗ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿಬಿಟ್ಟರು ಎಂದು ಅನಿಲ್ ತಂದೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಎಫ್ಐಆರ್ ನಲ್ಲಿ ಹೇಳಿದ್ದಾರೆ.

ದೂರು ದಾಖಲಿಸಿದ 24 ಗಂಟೆಗಳೊಳಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ದೇವಸ್ಥಾನದಲ್ಲಿ ತಮ್ಮ ಜೊತೆ ಕುಳಿತದ್ದಕ್ಕೆ ಅನಿಲ್ ಮೇಲೆ ಯುವಕರು ದ್ವೇಷ ಸಾಧಿಸಿದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಪಿ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಬಿಜೆಪಿಯೇ ಕಾರಣ ಎಂದು ಸಿದ್ದರಾಮಯ್ಯ ಆರೋಪ:ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವೈಖರಿ, ನಿಲುವುಗಳೇ ಇಂತಹ ಕೊಲೆಗಡುಕರು ನಿರ್ಭಯವಾಗಿ ದುಷ್ಕೃತ್ಯಕ್ಕೆ ಇಳಿಯಲು ಕಾರಣ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ, ಮೀಸಲಾತಿಯನ್ನು ವಿರೋಧಿಸುವ, ದಲಿತರನ್ನು ಕೀಳಾಗಿ ಕಾಣುವ  ನಾಯಕರಿಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಬಾಯಲ್ಲಿ ಸಮಾನತೆಯ ಮಂತ್ರ ಹೇಳುವ ಬಿಜೆಪಿ ಆಚರಣೆಯಲ್ಲಿ ಅಸಮಾನತೆ ಕುತಂತ್ರ ತೋರಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

SCROLL FOR NEXT