ರಾಜ್ಯ

ಸರಗಳ್ಳರ ಕಾಲಿಗೆ ಗುಂಡೇಟು: ಉತ್ತರ ಪ್ರದೇಶ ಮೂಲದ ಇಬ್ಬರ ಬಂಧನ

Raghavendra Adiga

ಬೆಂಗಳೂರು: ಸರಗಳ್ಳತನ ಮತ್ತು ದರೋಡೆ ಪ್ರಕರಣಗಳನ್ನು ಮಟ್ಟಹಾಕಲು ಬೆಳಗ್ಗಿನ ಜಾವ ವಿಶೇಷ ಗಸ್ತು ತಿರುಗುತ್ತಿದ್ದ ರಾಜಾಜಿನಗರ ಪೊಲೀಸರ ತಂಡ ಇಂದು ಬೆಳಗ್ಗೆ ಉತ್ತರ ಭಾರತದ ಇಬ್ಬರು ಸರಗಳ್ಳರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದೆ.

ಬಂಧಿತರನ್ನು ಪಂಜಾಬ್‌ನ ಲೂದಿಯಾನದ ಸಂಜಯ್ ಅಲಿಯಾಸ್ ರವಿ (30) ಹಾಗೂ ಉತ್ತರ ಪ್ರದೇಶದ ಶಾಂಬ್ಲಿ ನಿವಾಸಿ ಸುಭಾಷ್ (28) ಗುರುತಿಸಲಾಗಿದೆ.

ಇಂದು ಬೆಳಗ್ಗೆ 5.45ರ ಸುಮಾರಿಗೆ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಪಿಎಸ್ ವೃತ್ತದ ಬಳಿ ವ್ಯಕ್ತಿಯೊಬ್ಬರ ಸರವನ್ನು ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಿತ್ತು ಪರಾರಿಯಾಗಿದ್ದಾರೆ.

ಸ್ಥಳೀಯರು ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿದ್ದು ರಾತ್ರಿ ಹಾಗೂ ಬೆಳಗ್ಗೆ ಗಸ್ತಿನಲ್ಲಿದ್ದ ರಾಜಾಜಿನಗರ ಇನ್ಸ್​ಪೆಕ್ಟರ್ ವೆಂಕಟೇಶ್ ಹಾಗೂ ಶ್ರೀರಾಂಪುರ ಪಿಎಸ್​ಐ ವಿನೋದ್​, ಆರೋಪಿಗಳನ್ನು ಇಸ್ಕಾನ್ ದೇವಸ್ಥಾನದ ಬಳಿ ಹಿಡಿದಿದ್ದಾರೆ.  ಆದರೆ ಆರೋಪಿಗಳು ಬಂಧನಕ್ಕೆ ಮುಂದಾದ ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ಘಟನೆಯಲ್ಲಿ ಹೆಡ್ ಕಾನ್ಸ್​ಸ್ಟೇಬಲ್​ಗೆ ಗಾಯವಾಗಿದೆ. 

ಆತ್ಮರಕ್ಷಣೆಗಾಗಿ ಪೋಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳುಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿಂದೆ ಇದೇ ಆರೋಪಿಗಳ ವಿರುದ್ಧ ಗರದ ಹಲವು ಠಾಣೆಗಳಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತೆಂದು ತಿಳಿದುಬಂದಿದೆ. 

SCROLL FOR NEXT