ರಾಜ್ಯ

ರೈಲ್ವೇ ಉದ್ಯೋಗ ಕೊಡಿಸುವುದಾಗಿ ಹಲವರಿಗೆ ವಂಚನೆ: ಮಾಸ್ಟರ್ ಮೈಂಡ್ ಸೇರಿ ಐವರ ಬಂಧನ

Manjula VN

ಬೆಂಗಳೂರು: ರೈಲ್ವೇ ಉದ್ಯೋಗ ಕೊಡಿಸುವುದಾಗಿ ಹಲವರಿಗೆ ವಂಚನೆ ಮಾಡುತ್ತಿದ್ದ ಜಾಲವೊಂದರ ಮೇಲೆ ರೈಲ್ವೇ ಪೊಲೀಸರು ದಾಳಿ ನಡೆಸಿದ್ದು, ದಾಳಿಯಲ್ಲಿ ವಂಚನೆಯ ಕಿಂಗ್ ಪಿನ್ ಎಂದೇ ಹೇಳಲಾಗುತ್ತಿದ್ದ ತಮಿಳುನಾಡು ಮೂಲದ ಡಿ.ಬಾಬು ಸೇರಿ ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. 

ತಮಿಳುನಾಡು ಪೊಲೀಸರ ಸಹಾಯದೊಂದಿಗೆ ಆಗಸ್ಟ್ 26ರಂದು ರೈಲ್ವೈ ಪೊಲೀಸರು ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಇದೀಗ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. 

ವಂಚನೆಯ ಕಿಂಗ್ ಪಿನ್ ಆಗಿರುವ ಬಾಬುವ ಬೆಂಗಳೂರು ರೈಲ್ವೆ ವಿಭಾಗದಲ್ಲಿ ಕ್ಯಾರೇಜ್ ಮತ್ತು ಕಾರ್ಯಕಾರಿ ವಿಭಾಗದ ತಂತ್ರಜ್ಞನಾಗಿ ಕಾರ್ಯನಿರ್ವಹಿಸುತ್ತಿದ್ದ. ಇನ್ನು ಈತನ ಸಹಚರರಾದ ನಾಲ್ವರು ಆರೋಪಿಗಳು ಜನರಿಗೆ ಕ್ಲಾಸ್ ಸಿ ಅಥವಾ ಕ್ಲಾಸ್ ಡಿ ನೌಕರಿ ಕೊಡಿಸುವುದಾಗಿ ಹೇಳಿ ಹಲವು ಮಂದಿಯಿಂದ ಕೋಟ್ಯಾಂತರ ರುಪಾಯಿಗಳನ್ನು ವಂಚಿಸಿದ್ದರು. ಕಳೆದ 8 ವರ್ಷಗಳಿಂದ ಈ ತಂಡ ಹಗರಣ ನಡೆಸುತ್ತಿದ್ದು, ಜನರಿಗೆ ನಕಲಿ ನೇಮಕಾತಿ ಪತ್ರಗಳನ್ನು ನೀಡುತ್ತಿದ್ದರು ಎಂದು ತಿಳಿದುಬಂದಿದೆ. 

ಇವರಿಂದ ರೂ.4.95 ಲಕ್ಷ ವಂಚನೆಗೊಳಗಾಗಿರುವ ಗಿರೀಶ್ ಎಂಬವವರು ಮಾತನಾಡಿ, ಈ ವರೆಗೂ ಈ ತಂಡ ಹಲವರಿಂದ ರೂ.5 ಕೋಟಿವರೆಗೂ ವಸೂಲಿ ಮಾಡಿದೆ. ಪ್ರತೀಯೊಬ್ಬ ವ್ಯಕ್ತಿ ತನ್ನ ಕುಟುಂಬದ ಇಬ್ಬರು ವ್ಯಕ್ತಿಗಳಿಗೆ ನೌಕರಿ ಕೊಡಿಸಲು ರೂ.39 ಲಕ್ಷ ನೀಡಿದ್ದಾರೆ. ಮತ್ತೊಬ್ಬ ವ್ಯಕ್ತಿ ರೂ.25 ಲಕ್ಷ ನೀಡಿದ್ದಾನೆಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಮೂರು ಎಫ್ಐಆರ್ ಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT