ರಾಜ್ಯ

ಮಂಗಳೂರು ದೋಣಿ ದುರಂತ: ಮೃತರ ಕುಟುಂಬಗಳಿಗೆ 6 ಲಕ್ಷ ರೂ. ಪರಿಹಾರ ಮಂಜೂರಾತಿ ಪತ್ರ ವಿತರಣೆ

Raghavendra Adiga

ಮಂಗಳೂರು: ಮಂಗಳೂರು ಸಮೀಪದ ಉಳ್ಳಾಲದಲ್ಲಿ ಸಂಭವಿಸಿದ್ದ ಪರ್ಸಿನ್ ದೋಣಿ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಲಾ 6 ಲಕ್ಷ ರೂ. ಪರಿಹಾರ ಮೊತ್ತದ ಮಂಜೂರಾತಿಯನ್ನು ಗುರುವಾರ ಹಸ್ತಾಂತರಿಸಿದರು.

ಪರಿಹಾರ ಮಂಜೂರಾತಿ ಆದೇಶದ ನಕಲನ್ನು ಸಂತ್ರಸ್ತರ ಕುಟುಂಬ ಸದಸ್ಯರಿಗೆ ಉಪ ಆಯುಕ್ತರ ಕಚೇರಿಯಲ್ಲಿ ಹಸ್ತಾಂತರಿಸಿದ ಪೂಜಾರಿ, “ಇಲಾಖೆಯಿಂದ, ಕೇವಲ 6 ಲಕ್ಷ ರೂ.ಗಳ ಪರಿಹಾರವನ್ನು ಮಾತ್ರ ಒದಗಿಸುವ ಅವಕಾಶವಿರುವುದರಿಂದ, ಅದನ್ನು ಸಂತ್ರಸ್ತರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತಿದೆ. ಇಂದು ಸರ್ಕಾರಿ ರಜಾದಿನವಾಗಿರುವುದರಿಂದ, ನಾಳೆ (ಡಿಸೆಂಬರ್ 4) ವೇಳೆಗೆ ಪರಿಹಾರವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

"ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸ್ಥಳೀಯ ಶಾಸಕರೊಂದಿಗೆ ನಾನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ದೋಣಿ ದುರಂತದಲ್ಲಿ ಮಡಿದವರ ಪ್ರತಿ ಕುಟುಂಬಕ್ಕೆ 4 ಲಕ್ಷ ರೂ.ಗಳ ಹೆಚ್ಚುವರಿ ಪರಿಹಾರವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತೇನೆ. ಅಲ್ಲದೆ ಮೀನುಗಾರಿಕೆ ಇಲಾಖೆಯಲ್ಲಿ ಲಭ್ಯವಿರುವ ಯಾವುದೇ ಸೌಲಭ್ಯಗಳು ಇದ್ದರೂ, ಅವುಗಳನ್ನು ಸಂತ್ರಸ್ತರ ಕುಟುಂಬ ಸದಸ್ಯರಿಗೆ ಒದಗಿಸಲಾಗುವುದು" ಎಂದು ಅವರು ಭರವಸೆ ನೀಡಿದರು.

ಪರ್ಸಿನ್ ದೋಣಿ  ‘ಶ್ರೀ ರಕ್ಷಾ’ ದುರಂತದ ಬಗ್ಗೆ ತನಿಖೆ ನಡೆಸಲು ಮತ್ತು ಮೀನುಗಾರಿಕೆ ವೇಳೆ ಜೀವ ರಕ್ಷಕ ಜಾಕೆಟ್‌ಗಳನ್ನು ಕಡ್ಡಾಯವಾಗಿ ಬಳಸಲು ಮೀನುಗಾರರಲ್ಲಿ ಜಾಗೃತಿ ಮೂಡಿಸಲು ಮೀನುಗಾರಿಕೆ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡುತ್ತೇನೆ ಎಂದು ಸಚಿವ ಪೂಜಾರಿ ಹೇಳಿದರು.

ಈ ಸಂದರ್ಭದಲ್ಲಿ, ಸ್ಥಳೀಯ ಕಾರ್ಪೋರೇಟರ್ ದುರಂತದಲ್ಲಿ ಕಾಣೆಯಾದ ಮೀನುಗಾರ ಅನ್ಸಾರ್ ಅವರನ್ನು ಹುಡುಕಲು ಕ್ರೇನ್‌ನೊಂದಿಗೆ ಜೋಡಿಸಲಾಗುವ ಬಾರ್ಜ್‌ಗೆ ವ್ಯವಸ್ಥೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕಾಣೆಯಾದ ಮೀನುಗಾರನನ್ನು ಪತ್ತೆ ಹಚ್ಚಲು ಅಗತ್ಯ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ (ಡಿಸಿ) ಡಾ.ರಾಜೇಂದ್ರ ಕೆ ವಿ ಅವರಿಗೆ ನಿರ್ದೇಶನ ನೀಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವಯಸ ಕಾಮತ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ . ಉಪಸ್ಥಿತರಿದ್ದರು.

SCROLL FOR NEXT