ರಾಜ್ಯ

ಜಾಗೃತ ದಳದಿಂದ ದಾಳಿ: ಅಕ್ರಮವಾಗಿ ತಯಾರಿಸಿದ್ಧ ಬಿಡಿಎ ದಾಖಲೆಗಳು ವಶ, ಆರೋಪಿ ಬಂಧನ

Srinivasamurthy VN

ಬೆಂಗಳೂರು: ಬಿಡಿಎ ದಾಖಲೆಗಳನ್ನು ಅಕ್ರಮವಾಗಿ ತಯಾರಿಸುತ್ತಿದ್ದ ಕಚೇರಿ ಮೇಲೆ ಬಿಡಿಎ ಜಾಗೃತ ದಳದ ಅಧಿಕಾರಿಗಳು ಇಂದು ದಿಢೀರ್ ದಾಳಿ ನಡೆಸಿದ್ದು, ಕೋಟ್ಯಂತರ ಮೌಲ್ಯದ ದಾಖಲೆಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಸೆಂಟರ್ ಪಾಯಿಂಟ್‌ನಲ್ಲಿರುವ ಕಚೇರಿ ಮೇಲೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ದಾಳಿ ವೇಳೆ ಕೋಟ್ಯಂತರ ಮೌಲ್ಯದ ದಾಖಲೆಪತ್ರಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮೂಲಗಳ ಪ್ರಕಾರ ಬಿಡಿಎ  ಪ್ರಾಧಿಕಾರದ ಸ್ವತ್ತುಗಳಾದ ಹಂಚಿಕೆ ಪತ್ರ, ಸ್ವಾಧೀನ ಪತ್ರ, ಖಚಿತ ಅಳತೆ ವರದಿ ಇತರೆ ದಾಖಲೆಗಳನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳೊಂದಿಗೆ ಬಿಡಿಎ ಸಿಬ್ಬಂದಿಗಳು ಶಾಮೀಲಾಗಿ ಈ ಕಚೇರಿಯಲ್ಲಿ ತಯಾರಿಸುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಇಂದು ದಾಳಿ ನಡೆಸಿ ಬಿಡಿಎ ಸಿಬ್ಬಂದಿಗಳ ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಕಚೇರಿಯಲ್ಲಿ ಅಕ್ರಮವಾಗಿ ಬಿಡಿಎ ದಾಖಲೆಗಳ ತಯಾರಿಸುತ್ತಿರುವ ಕುರಿತು ಮಾಹಿತಿ ಬಂದಿತ್ತು. ಬಿಡಿಎದ ಉಪ ಕಾರ್ಯದರ್ಶಿ ಶಿವೇಗೌಡ ಹಾಗೂ ಕಿಂಗ್  ಇಂದ್ರಕುಮಾರ್ ಈ ಜಾಲದ ಕಿಂಗ್ ಪಿನ್ ಗಳಾಗಿದ್ದು, ಪ್ರೆಸ್ಟೀಜ್ ಪಾಯಿಂಟ್ ನಾಲ್ಕನೇ ಅಂತಸ್ತಿನಲ್ಲಿ ಈತ ಕಚೇರಿ ಹೊಂದಿದ್ದ, ಇದೇ ಕಚೇರಿಯಲ್ಲೇ ಅಕ್ರಮವಾಗಿ ದಾಖಲೆಗಳನ್ನು ತಯಾರಿಸಲಾಗುತ್ತಿತ್ತು. ಇವರಿಗೆ ಶರತ್ ಕುಮಾರ್, ಸಂಪತ್ ಕುಮಾರ್, ಪವಿತ್ರಮ್ಮ ಎಂಬ ಬಿಡಿಎ  ಸಿಬ್ಬಂದಿಗಳು ದಾಖಲೆ ಪತ್ರಗಳ ತಯಾರಿಸಲು ನೆರವು ನೀಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಡಿಎ ಆಯುಕ್ತ ಹೆಚ್ ಆರ್ ಮಹದೇವ ಅವರು, ಅಕ್ರಮವಾಗಿ ದಾಖಲೆಗಳ ತಯಾರಿಕೆ ಕುರಿತು ನಮಗೆ ಮೊದಲೇ ಮಾಹಿತಿ ಬಂದಿತ್ತು. ಈ ಕುರಿತ ಮಾಹಿತಿ ಇರುವ ಪೆನ್ ಡ್ರೈವ್ ಕೂಡ ಲಭ್ಯವಾಗಿತ್ತು. ಹೇಗೆ ಈ ಕಚೇರಿಯಲ್ಲಿ ದಾಖಲೆಗಳನ್ನು  ಸಿದ್ಧಪಡಿಸಲಾಗುತ್ತಿದೆ. ಯಾರೆಲ್ಲಾ ಈ ಜಾಲದಲ್ಲಿ ಶಾಮೀಲಾಗಿದ್ದಾರೆ ಎಂಬಿತ್ಯಾದಿ ಅಂಶಗಳು ಅದರಲ್ಲಿದ್ದವು. ಸಂಸ್ಛೆಯ ಉಪ ಕಾರ್ಯದರ್ಶಿ ಶಿವೇಗೌಡ ಅವರು ಈ ಕಚೇರಿಯನ್ನು ತಮ್ಮ ಉಪ ಕಚೇರಿಯಾಗಿ ಬಳಕೆ ಮಾಡುತ್ತಿದ್ದರು. ಅಲ್ಲದೆ ಅಕ್ರಮವಾಗಿ ಬಿಡಿಎ ಸಿಬ್ಬಂದಿಗಳನ್ನು ಇಲ್ಲಿಗೆ  ಕೆಲಸಕ್ಕೆ ನಿಯೋಜಿಸಿಕೊಂಡಿದ್ದರು. ಕಳೆದ ರಾತ್ರಿ ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಇಂದು ದಾಳಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಬಿಡಿಎ ಟಾಸ್ಕ್ ಫೋರ್ಸ್ ನ ಶಿವಕುಮಾರ್ ಗುನಾರೆ ಅವರು ಮಾತನಾಡಿ, ನಾವು ನಡೆಸಿದ ತನಿಖೆಯಲ್ಲಿ ಅಕ್ರಮದ ಕುರಿತು ಮಾಹಿತಿ ಲಭ್ಯವಾಗಿದ್ದು. ಈ ಕುರಿತು ಎಫ್ ಐಆರ್ ಕೂಡ ಸಲ್ಲಿಕೆ ಮಾಡಿದ್ದೇವೆ. ಸಂಸ್ಥೆಗೆ ವಂಚಿಸಿದ ಆರೋಪದ ಮೇರೆಗೆ ಐಪಿಸಿ ಸೆಕ್ಷನ್ 409 ಮತ್ತು 468 ರ  ಅಡಿಯಲ್ಲಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾದ ದಾಳಿ ಇನ್ನೂ ಮುಂದುವರೆದಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಂತೆಯೇ ಈ ಕುರಿತಂತೆ ದಾಖಲೆಗಳು ಮತ್ತು ಇತರ ಪುರಾವೆಗಳು / ಮರು  ಸಂಗ್ರಹಿಸಲಾಗುತ್ತಿದೆ. ಕಚೇರಿಯಲ್ಲಿ ದೊರೆತ ಅಪಾರ ಪ್ರಮಾಣದ ದಾಖಲೆ ಪತ್ರಗಳು, ಬಿಡಿಎ ಹೆಸರಿನ ಲೆಟರ್‌ಹೆಡ್‌ಗಳು, ಮೊಹರುಗಳು, ಹಂಚಿಕೆ ಪತ್ರಗಳು, ಸ್ವಾಧೀನ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಪ್ರಮುಖ ಆರೋಪಿ ಇಂದ್ರಕುಮಾರ್ ಎಂಬುವವರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಇದರಲ್ಲಿ ಪ್ರಾಧಿಕಾರದ ಸಿಬ್ಬಂದಿಗಳು ಶಾಮೀಲಾಗಿರುವುದು ಕಂಡುಬಂದಿದೆ. ಈ ಸಿಬ್ಬಂದಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

SCROLL FOR NEXT