ರಾಜ್ಯ

ಬೆಂಗಳೂರು: ರಸ್ತೆಗುಂಡಿ ಅಪಘಾತದಲ್ಲಿ ಬಲಿಯಾದವರಿಗೆ ರೂ.3 ಲಕ್ಷ ಪರಿಹಾರ ನೀಡಲು ಬಿಬಿಎಂಪಿ ಮುಂದು

Manjula VN

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳಿಗೆ ಬಿದ್ದು ಮೃತರಾದವರ ಕುಟುಂಬಸ್ಥರಿಗೆ ಹಾಗೂ ಗಾಯಾಳುಗಳಿಗೆ ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 

ಈ ಸಂಬಂಧ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ, ರಸ್ತೆ ಹಾಗೂ ಪಾದಚಾರಿ ಮಾರ್ಗ ಅಸಮರ್ಪಕ ನಿರ್ವಹಣೆ, ರಸ್ತೆ ಗುಂಡಿಗಳಿಂದ ಅಪಘಾತವಾಗಿ ಪ್ರಾಣಹಾನಿಯಾದರೆ ಅಥವಾ ಗಾಯಗೊಂಡಿದ್ದರೆ ವೈದ್ಯಕೀಯ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. 

ಅಪಘಾತ ನಡೆಸಿದ 30 ದಿನಗಳೊಳಗೆ ಪರಿಹಾರ ಅರ್ಜಿ ಸಲ್ಲಿಸಬೇಕು. ಸಣ್ಣ ಗಾಯಗಳಾಗಿದ್ದಲ್ಲಿ ರೂ.5 ಸಾವಿರ ಗಾಯಕ್ಕೆ ಮೂರು ದಿನಗಳಿಂದ ಹೆಚ್ಚಿನ ಅವಧಿಯ ಚಿಕಿತ್ಸೆ ಅಗತ್ಯವಿದ್ದರೆ ರೂ.10 ಸಾವಿರ, ಗಂಭೀರ ಗಾಯಾಳುಗಳಿಗೆ ರೂ.15 ಸಾವಿರ, ಮೃತರಾದರೆ ಸಂತ್ರಸ್ತರ ಕುಟುಂಬಕ್ಕೆ ರೂ.3 ಲಕ್ಷ ಪರಿಹಾರ ನೀಡಲಾಗುತ್ತದೆ. ಈ ನಡುವೆ ಪಾಲಿಕೆಯ ವಿಶೇಷ ಆಯುಕ್ತರಿಗೆ ಗಾಯಾಳುಗಳ ವೈದ್ಯಕೀಯ ವೆಚ್ಚಕ್ಕಾರಿ ರೂ.10 ಸಾವಿರ ವರೆಗೂ ನೀಡುವ ಅಧಿಕಾರ ನೀಡಲಾಗಿದೆ. 

ಹೈಕೋರ್ಟ್ ಸೂಚನೆ ಮೇರೆಗೆ ಪಾಲಿಕೆ ರಸ್ತೆ ಗುಂಡಿಗಳಿಂದ ಪ್ರಾಣಹಾನಿಯಾಗುವ ಹಾಗೂ ಗಾಯಾಳುಗಳಿಗೆ ಪರಿಹಾರ ನೀಡಲು ಈ ಮಾರ್ಗಸೂಚಿ ಸಿದ್ಧಪಡಿಸಿದೆ. 

ಈ ಪರಿಹಾರ ಮಾರ್ಗಸೂಚಿ ಅನ್ವಯ ಘಟನೆ ನಡೆದ 30 ದಿನಗಳೊಳಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು. ಈ ನಿಗದಿತ ಅವಧಿ ಮೀರಿದ ಅರ್ಜಿ ಸಲ್ಲಿಸಿದರೆ ಅದನ್ನು ತಿರಸ್ಕರಿಸಲಾಗುತ್ತದೆ. ಅರ್ಜಿದಾರರಿಗೆ ಪ್ರತ್ಯಕ್ಷ ಸಾಕ್ಷಿಗಳು, ಪೊಲೀಸ್ ದೂರು ಅಥವಾ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಯಾವುದೇ ರೀತಿಯ ದಾಖಲೆಗಳು ಅಥವಾ ಪುರಾವೆಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. 

SCROLL FOR NEXT