ರಾಜ್ಯ

ಐಎಂಎ ಹಗರಣ: ಮಾಜಿ ಸಚಿವ ರೋಷನ್ ಬೇಗ್ ಗೆ ಜಾಮೀನು 

Sumana Upadhyaya

ಬೆಂಗಳೂರು: ಐಎಂಎ(ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಗೆ ಶನಿವಾರ ಸಿಬಿಐ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಐಎಂಎ ಪ್ರಕರಣದ ಮುಖ್ಯ ಆರೋಪಿ ಮನ್ಸೂರ್ ಖಾನ್ ನಿಂದ 200 ಕೋಟಿ ರೂಪಾಯಿ. ಪಡೆದಿದ್ದಾರೆಂಬ ಆರೋಪದ ಹಿನ್ನೆಲೆ ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ರೋಷನ್ ಬೇಗ್ ಅವರನ್ನು ಸಿಬಿಐ ಕಸ್ಟಡಿಗೆ ನೀಡಿ ಸಿಬಿಐ ವಿಶೇಷ ಕೋರ್ಟ್ ಆದೇಶ ನೀಡಿತ್ತು. 
ತಮಗೆ ಜಾಮೀನು ಮಂಜೂರು ಮಾಡುವಂತೆ ರೋಶನ್ ಬೇಗ್ ಅರ್ಜಿ ಸಲ್ಲಿಸಿದ್ದರು.

ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ಅನೇಕ ರಾಜಕಾರಣಿಗಳ ಹೆಸರು ಕೇಳಿಬಂದಿತ್ತು. ಅವರಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಮಾಜಿ ಶಾಸಕ ರೋಷನ್ ಬೇಗ್ ಹೆಸರು ಪ್ರಮುಖ. ಕೆಲ ದಿನಗಳ ಹಿಂದೆ ರೋಷನ್ ಬೇಗ್ ನಿವಾಸದ ಮೇಲೆ ಏಕಾಏಕಿ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.

ಖಾಸಗಿ ಸಂಸ್ಥೆ ಐ ಮಾನಿಟರಿ ಅಡ್ವೈಸರಿ ಗ್ರೂಪ್ ನ ಮಾಲೀಕ ಮನ್ಸೂರ್ ಖಾನ್ ಅಧಿಕ ಬಡ್ಡಿಯ ಆಮಿಷವೊಡ್ಡಿ ಭಾರೀ ಪ್ರಮಾಣದಲ್ಲಿ ಜನರಿಂದ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂಬ ಆರೋಪವಾಗಿದೆ. ಅಧಿಕ ಹಣ ಸಿಗುವ ಆಸೆಯಿಂದ ಸಾವಿರಾರು ಮಧ್ಯಮ ಮತ್ತು ಬಡ ವರ್ಗದ ಮುಸ್ಲಿಮರು ಹಾಗೂ ಇತರ ವರ್ಗದ ಜನರು ಹೂಡಿಕೆ ಮಾಡಿದ್ದರು. 

ಉದ್ಯಮ ಬೆಳೆಯುತ್ತಾ ಹೋದಂತೆ ಸಂಸ್ಥೆ ಮಾಲೀಕ ಚಿನ್ನದ ವ್ಯಾಪಾರ, ರಿಯಲ್ ಎಸ್ಟೇಟ್, ಆರೋಗ್ಯ ಸೇವೆ ಮತ್ತು ಇತರ ಉದ್ದಿಮೆಗಳಲ್ಲಿ ತೊಡಗಿಸಿಕೊಂಡರು.ಇದರಲ್ಲಿ ರಾಜ್ಯದ ಹಲವು ರಾಜಕಾರಣಿಗಳು ಕೂಡ ಹೂಡಿಕೆ ಮಾಡಿದ್ದು ಕಪ್ಪು ಹಣವನ್ನು ಸಕ್ರಮಗೊಳಿಸಲು ಅವರಿಗೆ ಇದೊಂದು ದಾರಿಯಾಯಿತು ಎಂದು ಹೇಳಲಾಗುತ್ತಿದೆ.

ಕಳೆದ 2018ರ ಅಕ್ಟೋಬರ್ ಸಮಯದಲ್ಲಿ ಆರ್ ಬಿಐ ಮತ್ತು ಇತರ ಕೇಂದ್ರ ಸರ್ಕಾರದ ವಾಣಿಜ್ಯ ಸಂಸ್ಥೆಗಳು ತಪಾಸಣೆ ನಡೆಸಿದಾಗ ಇದರಲ್ಲಿ ಅವ್ಯವಹಾರ, ಹಗರಣ ನಡೆದಿರುವುದು ಬೆಳಕಿಗೆ ಬಂತು.  

SCROLL FOR NEXT