ರಾಜ್ಯ

ಗೋಹತ್ಯೆ, ಲವ್ ಜಿಹಾದ್ ವಿರುದ್ಧ ಸರ್ಕಾರದಿಂದ ಮಸೂದೆ: ಡಿಸಿಎಂ ಅಶ್ವಥ್ ನಾರಾಯಣ

Srinivasamurthy VN

ಬೆಂಗಳೂರು: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯಾನಾಥ್ ಅವರ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ಮತ್ತು ಲವ್ ಜಿಹಾದ್ ಮಸೂದೆಗಳ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ಕರ್ನಾಟಕದಲ್ಲೂ ಇಂತಹ ಮಸೂದೆ ತರಲು ಸರ್ಕಾರ ಚಿಂತನೆಯಲ್ಲಿ  ತೊಡಗಿದೆ.

ಈ ಬಗ್ಗೆ ಸ್ವತಃ ಡಿಸಿಎಂ ಡಾ.ಎನ್.ಎನ್. ಅಶ್ವತ್ನಾರಾಯಣ್ ಹೇಳಿದ್ದು, ಎಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, 'ಲವ್ ಜಿಹಾದ್ ಮತ್ತು ಗೋಹತ್ಯೆ ವಿರುದ್ಧ ಮಸೂದೆಗಳನ್ನು ತರಲು ರಾಜ್ಯ ಸರ್ಕಾರ ಪ್ರಕ್ರಿಯೆಯಲ್ಲಿದೆ. ಅನೇಕ ರಾಜ್ಯಗಳು ಈಗಾಗಲೇ ಮಸೂದೆಗಳನ್ನು  ತಂದಿವೆ. ನಾವು 'ಲವ್ ಜಿಹಾದ್' ವಿರುದ್ಧ ಮಸೂದೆಗಳನ್ನು ತರಲು ಮತ್ತು ಗೋಹತ್ಯೆಗೆ ನಿಷೇಧ ಹೇರುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಹೇಳಿದರು.

ಮುಂಬರುವ ಶಾಸಕಾಂಗ ಅಧಿವೇಶನದಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರ ಗೋಹತ್ಯೆ ವಿರುದ್ಧ ಮಸೂದೆಯನ್ನು ಮಂಡಿಸಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿತ್ತು.

ಕಳೆದ ಅಕ್ಟೋಬರ್ ನಲ್ಲಿ ಬಲ್ಲಾಬ್ ಘಡದಲ್ಲಿ 21 ವರ್ಷದ ಯುವತಿಯನ್ನು ಆಕೆಯ ಕಾಲೇಜಿನ ಎದರುಗಡೆಯೇ ಇಬ್ಬರು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದರು. ಈ ಹತ್ಯೆ ಬಳಿಕ ದೇಶಾದ್ಯಂತ ಲವ್ ಜಿಹಾದ್ ಸುದ್ದಿ ವ್ಯಾಪಕ ಚರ್ಚೆಗೀಡಾಗುತ್ತಿದೆ. ಇತ್ತೀಚೆಗೆ, ಉತ್ತರ ಪ್ರದೇಶದ  ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು,  ಉತ್ತರ ಪ್ರದೇಶ ಸರ್ಕಾರ ಪ್ರಸ್ತಾಪಿಸಿದ್ದ ಕಾನೂನುಬಾಹಿರ ಮತಾಂತರದ ಸುಗ್ರೀವಾಜ್ಞೆ 2020 ಅನ್ನು  ಅನುಮೋದಿಸಿದ್ದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಯಾಬಿನೆಟ್ ನವೆಂಬರ್ 24 ರಂದು ಸುಗ್ರೀವಾಜ್ಞೆಯನ್ನು ಕಾನೂನಾಗಿ ಪರಿವರ್ತಿಸಿದ್ದರು.ಇದೀಗ "ಲವ್ ಜಿಹಾದ್" ಸಂಬಂಧಿತ ಅಪರಾಧಗಳಿಗೆ ಉತ್ತರ ಪ್ರದೇಶದಲ್ಲಿ ಗರಿಷ್ಠ 10 ವರ್ಷಗಳ ಶಿಕ್ಷೆಯನ್ನು ನೀಡಬಹುದಾಗಿದೆ. ಏತನ್ಮಧ್ಯೆ, ಇದರ ಬೆನ್ನಲ್ಲೇ  ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೂಡ "ಬಲವಂತದ ಧಾರ್ಮಿಕ ಮತಾಂತರಗಳನ್ನು" ತಡೆಯಲು ಕಾನೂನುಗಳನ್ನು ತರಲು ಪ್ರಸ್ತಾಪಿಸಿದ್ದಾರೆ.  
 

SCROLL FOR NEXT