ರಾಜ್ಯ

ನಾಳೆಯಿಂದ ಚಳಿಗಾಲದ ಅಧಿವೇಶನ, ಮೊದಲ ದಿನ ಸಿಎಂ ಯಡಿಯೂರಪ್ಪ ಗೈರು ಸಾಧ್ಯತೆ

Raghavendra Adiga

ಬೆಂಗಳೂರು: ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ ನಾಳೆ (ಡಿಸೆಂಬರ್ 7) ರಿಂದ ಒಂದು ವಾರ ಕಾಲ ನಡೆಯಲಿದೆ. ಆದರೆ ಈ ನಡುವೆಯೇ ಸಿಎಂ ಬಿ.ಎಸ್. ಯಡಿಯೂರಪ್ಪ ನಾಳೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು ಅಧಿವೇಶನಕ್ಕೆ ಗೈರಾಗುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಶಿವಮೊಗ್ಗಕ್ಕೆ ಭೇಟಿ ನೀಡುವವರಿದ್ದಾರೆ. ಅವರು ಬೆಳಿಗ್ಗೆ 11.45ಕ್ಕೆ ಶಿವಮೊಗ್ಗಕ್ಕೆ ತೆರಳಿ ಮಧ್ಯಾಹ್ನ 3.45ಕ್ಕೆ ಬೆಂಗಳೂರಿಗೆ ವಾಪಾಸಾಗಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಸ್ಪೀಕರ್ ಹಾಗೂ ಸಭಾಪತಿ ನೇತೃತ್ವದಲ್ಲಿ ನಾಳೆಯಿಂದ ಡಿಸೆಂಬರ್ 15ರವರೆಗೆ ಅಧಿವೇಶನ ನಡೆಯಲಿದೆ. ಈ ವೇಳೆ ಆಡಳಿತಾರೂಢ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸಿಎಂ ಹಾಗೂ ಸಚಿವರ ವಿರುದ್ಧ ವಾಕ್ಸಮರಕ್ಕೆ ಪ್ರತಿಪಕ್ಷಗಳು ಸಜ್ಜಾಗಿದೆ. 

ಈ ಬಾರಿಯ ಅಧಿವೇಶನದಲ್ಲಿ ಬಿಬಿಎಂಪಿ ವಿಧೇಯಕ ಸೇರಿದಂತೆ ಮಹತ್ವದ ವಿಧೇಯಕಗಳ ಮಂಡನೆ ಆಗಲಿದೆ. ಅಲ್ಲದೆ ಅಧಿವೇಶ್ನದ ನಡುವೆ ಡಿಸೆಂಬರ್ 14, 15ರಂದು "ಒಂದು ದೇಶ ಒಂದು ಚುನಾವಣೆ" ಸಂಬಂಧ ವಿಶೇಷ ಚರ್ಚೆ ಇರಲಿದೆ.

ಇನ್ನು ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದ ಬದಲಿಗೆ ಬೆಂಗಳೂರಿನಲ್ಲೇ ನಡೆಯುತ್ತಿದೆ, ಇತ್ತೀಚೆಗೆ ನಡೆದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಪ್ರತಿಪಕ್ಷಗಳ ಟೀಕೆ, ವಾಗ್ದಾಳಿಗಳನ್ನು ಎದುರಿಸಲು ತಕ್ಕ ಉತ್ತರ ನೀಡಲು ಸಿದ್ದವಾಗಿದೆ. 

SCROLL FOR NEXT